
ಪ್ರಗತಿವಾಹಿನಿ ಸುದ್ದಿ: ವಿಧಾನಸಭೆ ಆವರಣದಲ್ಲೇ ಹಿರಿಯ ಐಎಎಸ್ ಅಧಿಕಾರಿ ಅವರ ಆಪ್ತ ಕಾರ್ಯದರ್ಶಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ತೆಲಂಗಾಣದ ವಿಧಾನಸಭೆಯ ಆವರಣದಲ್ಲಿ ಈ ಘಟನೆ ನಡೆದಿದೆ. ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಎಎಸ್ ಅಧಿಕಾರಿ ನವೀನ್ ಮಿತ್ತಲ್ ಅವರ ಆಪ್ತ ಕಾರ್ಯದರ್ಶಿ (ಪಿಎಸ್) ರಾಜು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರಾಜು ಅವರು ಪ್ರಜ್ಞಾಹೀನರಾಗಿ ಬೀಳುತ್ತಿದ್ದಂತೆ ಅಲ್ಲೇ ಇದ್ದ ಸಚಿವ ವಕಿತಿ ಶ್ರೀಹರಿ ತಕ್ಷಣ ಧಾವಿಸಿ ಪ್ರಥಮ ಚಿಕಿತ್ಸೆಯಾಗಿ ಸಿಪಿಆರ್ ನೀಡಿ ಬದುಕಿಸಲು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನವೀನ್ ಮಿತ್ತಲ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ರಾಜು ಅವರು ಅಧಿಕೃತ ಕಲಾಪಗಳ ಹಿನ್ನೆಲೆಯಲ್ಲಿ ಅಸೆಂಬ್ಲಿಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿ ಸ್ಥಳದಲ್ಲೇ ಕುಸಿದು ಬಿದ್ದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಚಿವ ವಕಿತಿ ಶ್ರೀಹರಿ ಸ್ವತಃ ಮುಂದಾಗಿ ರಾಜು ಅವರ ಎದೆ ಒತ್ತಿ ಸಿಪಿಆರ್ ನೀಡುವ ಮೂಲಕ ಉಸಿರು ಉಳಿಸಲು ಶ್ರಮಿಸಿದರು. ತಕ್ಷಣ ಆಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.



