Belagavi NewsBelgaum NewsLatestPolitics

*ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಜನತೆಗೆ ಸುಳ್ಳು ಹೇಳುತ್ತಿದ್ದಾರೆ: ಡಾ.ಅಂಜಲಿ*

ಪ್ರಗತಿವಾಹಿನಿ ಸುದ್ದಿ: ಖಾನಾಪುರ: ಇಲ್ಲಿನ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ ಅವರಿಗೆ ಕ್ಷೇತ್ರದ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಅವರನ್ನು ವಿಧಾನಸಭೆಗೆ ಕಳಿಸಿದ ಜನರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತರುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ತಾಲ್ಲೂಕಿನ ಕುಸಮಳಿ ಗ್ರಾಮದ ಬಳಿ ಮಲಪ್ರಭಾ ನದಿಯಿಂದ ಬೆಳಗಾವಿ ತಾಲ್ಲೂಕಿನ ಹಳ್ಳಿಗಳಿಗೆ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ನೆರೆಯ ಕ್ಷೇತ್ರದ ಶಾಸಕರ ಜೊತೆ ಕೈ ಜೋಡಿಸುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಓಲೈಕೆಗಾಗಿ ಇಲ್ಲಿಯ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಕ್ಷೇತ್ರದ ಜನತೆಗೆ ಒಳಿತು ಮಾಡುವಲ್ಲಿ ಅವರಲ್ಲಿರುವ ನಿಷ್ಕ್ರೀಯತೆಯ ಕಾರಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ” ಎಂದು ಮಾಜಿ ಶಾಸಕಿ, ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳಕರ ಆರೋಪಿಸಿದರು.

Home add -Advt

ಪಟ್ಟಣದ ಲೋಕೋಪಯೋಗಿ ಇಲಾಖೆಯ ವಿಶ್ರಾಂತಿ ಗೃಹದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಇತ್ತೀಚೆಗೆ ಹಲಗೇಕರ ಪಟ್ಟಣದಲ್ಲಿ ಸರ್ವಪಕ್ಷೀಯ ಸಭೆಯನ್ನು ಆಯೋಜಿಸಿದ್ದು, ಆ ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲ. ಸರ್ವಪಕ್ಷೀಯ ಸಭೆ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅವರು ಕುಸಮಳಿ ಬಳಿ ಏತ ನೀರಾವರಿ ಯೋಜನೆ 2023ಕ್ಕೂ ಮೊದಲು ಮಂಜೂರಾಗಿತ್ತು ಎಂದಿದ್ದರು. ಆದರೆ ಈ ಯೋಜನೆ 2024ರಲ್ಲಿ ಮಂಜೂರಾಗಿದ್ದು, ತಮಗೂ ಈ ಯೋಜನೆಗೂ ಯಾವುದೇ ಸಂಬಂಧವಿಲ್ಲ. ಈ ಯೋಜನೆಯಿಂದ ತಾಲ್ಲೂಕಿನ ಜನತೆಗೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಈ ಯೋಜನೆಗೆ ತಾವು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದು, ಶಾಸಕರು ತಮ್ಮ ಕ್ಷೇತ್ರದ ಜನರಿಗೆ ನೀರಿನ ಸೌಲಭ್ಯ ಒದಗಿಸುವ ಪ್ರಯತ್ನ ಮಾಡದೇ ಬೇರೆ ಕ್ಷೇತ್ರಕ್ಕೆ ಅನುಕೂಲ ಮಾಡಹೊರಟಿರುವುದು ಎಷ್ಟರ ಮಟ್ಟಿಗೆ ಸರಿ” ಎಂದು ಪ್ರಶ್ನಿಸಿದರು.

“ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೊಳಿಸುವಲ್ಲಿ ತಾವು ಅವರಿಗೆ ಅಡಚಣೆ ಉಂಟುಮಾಡುತ್ತಿರುವುದಾಗಿ ಹಲಗೇಕರ ಅವರು ಎಲ್ಲ ಕಡೆ ಹೇಳುತ್ತ ತಿರುಗುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಮತ್ತು ಅವುಗಳಿಗೆ ಪರಿಹಾರ ಹುಡುಕುವ ಯಾವುದೇ ಪ್ರಯತ್ನ ಅವರಿಂದ ಆಗಿಲ್ಲ. ಅವರ ಅಧಿಕಾರಾವಧಿಯಲ್ಲಿ ಕೊನೆ ಪಕ್ಷ ಒಂದೇ ಒಂದು ಕೆಡಿಪಿ ಸಭೆಯೂ ನಡೆದಿಲ್ಲ. ಅಧಿಕಾರಿಗಳ ಮೇಲೆ ಶಾಸಕರ ಹಿಡಿತವಿಲ್ಲದ ಕಾರಣ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಕ್ಷೇತ್ರಕ್ಕೆ ಅನುದಾನ ಬಾರದ ಕಾರಣ ಸ್ಥಳೀಯ ಗುತ್ತಿಗೆದಾರರು ಕೆಲಸವಿಲ್ಲದೇ ಕುಳಿತಿದ್ದಾರೆ” ಎಂದು ವಿವರಿಸಿದರು.

“2018-23ರ ಅವಧಿಯಲ್ಲಿ ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ವಿರೋಧ ಪಕ್ಷದಲ್ಲಿದ್ದರೂ ಸರ್ಕಾರದ ಗಮನ ಸೆಳೆದು ಕ್ಷೇತ್ರದಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಂಡಿದ್ದು, 4500ಕ್ಕೂ ಹೆಚ್ಚು ಮನೆಗಳ ಮಂಜೂರು, ರಸ್ತೆಗಳ ಅಭಿವೃದ್ಧಿ, ಅನೇಕ ಸೇತುವೆಗಳು, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಹೊಸ ಬಸ್ ನಿಲ್ದಾಣ, ಶಾಲೆ ಮತ್ತು ಅಂಗನವಾಡಿ ಕೊಠಡಿಗಳ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಅನುದಾನ ತರಲಾಗಿತ್ತು. ಈಗ ಶಾಸಕರು ರಾಜ್ಯದ ಕಾಂಗ್ರೆಸ್ ಸರ್ಕಾರ ಖಾನಾಪುರ ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಹಾಗಾದರೆ ಬಿಜೆಪಿ ಶಾಸಕರಿರುವ ಉಳಿದ ಕ್ಷೇತ್ರಗಳಿಗೆ ಅನುದಾನ ಹೇಗೆ ಬರುತ್ತಿದೆ ಮತ್ತು ಬೆಳಗಾವಿ ದಕ್ಷಿಣ, ಅರಭಾವಿ, ಗೋಕಾಕ, ನಿಪ್ಪಾಣಿ ಸೇರಿದಂತೆ ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಹೇಗೆ ಹೊಸ-ಹೊಸ ಕೆಲಸಗಳು ನಡೆಯುತ್ತಿವೆ ಎಂಬುದನ್ನು ಶಾಸಕರು ನೋಡಿಬರಲಿ. ಶಾಸಕರಾಗಿ ಮೂರು ವರ್ಷ ಕಳೆದರೂ ಕ್ಷೇತ್ರಕ್ಕೆ ಒಂದೇ ಒಂದು ಮನೆ ಮಂಜೂರು ಮತ್ತು ಹೊಸ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಉದಾಹರಣೆಗಳಿಲ್ಲ. ಈಗಲೂ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಶಾಸಕರು ತಮ್ಮ ಜೊತೆ ಬಹಿರಂಗ ಚರ್ಚೆಗೆ ಸಿದ್ಧವಿದ್ದರೆ ತಾವೂ ಸಹ ಸಿದ್ಧ” ಎಂದು ಡಾ.ಅಂಜಲಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮಹಾದೇವ ಕೋಳಿ, ಬ್ಲಾಕ್ ಅಧ್ಯಕ್ಷ ಮಹಾಂತೇಶ ರಾಹೂತ, ಮುಖಂಡರಾದ ಸಾವಿತ್ರಿ ಮಾದಾರ, ತೋಹಿದ ಚಾಂದಖಾನವರ, ಭರತೇಶ ತೋರೋಜಿ, ಸುರೇಶ ಜಾಧವ, ಗುಡೂ ತೇಕಡಿ, ದೇಮಣ್ಣ ಬಸರಿಕಟ್ಟಿ ಮತ್ತಿತರರು ಇದ್ದರು.

Related Articles

Back to top button