*ಗುರುಪರಂಪರೆ ಮಹತ್ವ ಕಳೆದುಕೊಳ್ಳುತ್ತಿದೆ: ಮಂಜುಳಾ ಜೋಶಿ*

ಗುರುಪರಂಪರೆ ಮಹತ್ವ ಕಳೆದುಕೊಳ್ಳುತ್ತಿದೆ: ಮಂಜುಳಾ ಜೋಶಿ
ಪ್ರಗತಿವಾಹಿನಿ ಸುದ್ದಿ/ ಬೆಳಗಾವಿ: ಸಂಗೀತದಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವದ್ದು. ಆದರೆ ಇತ್ತೀಚೆಗೆ ಗುರು ಪರಂಪರೆ ಮಹತ್ವ ಕಳೆದುಕೊಳ್ಳುತ್ತಿದೆ ಎಂದು ವಿದೂಷಿ ಮಂಜುಳಾ ಜೋಶಿ ಹೇಳಿದರು.

ಇಲ್ಲಿಯ ಚನ್ನಮ್ಮ ನಗರದಲ್ಲಿ ಶನಿವಾರ ಸಂಜೆ ವೇಣುನಾದ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸುರೇಶ ಸರದೇಸಾಯಿ ಮತ್ತು ಕೀರ್ತಿ ಸರದೇಸಾಯಿ ದಂಪತಿಯ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಇಂದು ಆನ್ ಲೈನ್ ಕಲಿಕೆ ಹೆಚ್ಚಾಗುತ್ತಿದೆ. ಆದರೆ ಸಂಗೀತದ ವಿಷಯಕ್ಕೆ ಬಂದರೆ ಆನ್ ಲೈನ್ ಗಿಂತ ನೇರವಾಗಿ ಕಲಿಯುವುದೇ ಮುಖ್ಯ ಎಂದು ಅವರು ಹೇಳಿದರು.

ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ಅನಂತ ಪಪ್ಪು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಂದನಾ ಕಾರ್ಯಕ್ರಮಕ್ಕೆ ಅತೀ ಹೆಚ್ಚು ಮಹತ್ವವಿದೆ. ಇಂದು ಗೂಗಲ್ ಗುರುವಿನ ಸ್ಥಾನ ಪಡೆಯುತ್ತಿದೆ. ಆದರೆ ಅಲ್ಲಿ ಭಾವನೆಗಳಿಗೆ ಪ್ರಾಮುಖ್ಯತೆ ಇರುವುದಿಲ್ಲ. ನಿಜ ಜೀವನದಲ್ಲಿ ಭಾವನೆಗಳು ಅಗತ್ಯ ಎಂದರು.
ಉಗಾರ ಸಕ್ಕರೆ ಕಾರ್ಖಾನೆಯ ಮಾಲಿಕರಾದ ಶಿರಗಾಂವ್ಕರ್ ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸುರೇಶ ಸರದೇಸಾಯಿ, ಕೀರ್ತಿ ಸರದೇಸಾಯಿ, ವೇಣುಗೋಪಾಲ ಗೋಸಾವಿ ವೇದಿಕೆಯಲ್ಲಿದ್ದರು. ಭರತನಾಟ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಪೂರ್ಣಿಮಾ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರವಿಂದ ಪಾಟೀಲ ಸರದೇಸಾಯಿ ದಂಪತಿಯನ್ನು ಪರಿಚಯಿಸಿದರು. ಅಶ್ವಿನಿ ಜೋಶಿ ನಿರೂಪಿಸಿದರು.
ಸ್ನೇಹಾ ದೇಶಪಾಂಡೆ ವಂದಿಸಿದರು. ಸರದೇಸಾಯಿ ದಂಪತಿಯ ಶಿಷ್ಯರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗುರು ವಂದನೆ ಸಲ್ಲಿಸಿದರು.



