*ಇನ್ಸ್ ಪೆಕ್ಟರ್ ಧನಂಜಯ್ ಅಮಾನತಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಮೈಸೂರು ಜಿಲ್ಲೆಯ ಟಿ.ನರಸೀಪುರ ಇನ್ಸ್ ಪೆಕ್ಟರ್ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಭಟನೆ ಹೆಚ್ಚುತ್ತಿರುವ ಬೆನ್ನಲ್ಲೇ ಇನ್ಸ್‌ಪೆಕ್ಟರ್ ಧನಂಜಯ್ ಅವರನ್ನು ಅಮಾನತುಗೊಳಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಟಿ. ನರಸೀಪುರದಲ್ಲಿ ಗಣೇಶೋತ್ಸವ ಆಚರಣೆ ಸಮಿತಿ ಯುವಕರನ್ನು ಶಾಂತಿ ಸಭೆ ನಡೆಸಿದ್ದ ಇನ್ಸ್ ಪೆಕ್ಟರ್ ಧನಂಜಯ್, ಈಬಾರಿ ಮಸೀದಿ ರಸ್ತೆಗಳಲ್ಲಿ ಗಣೇಶ ಮೆರವಣಿಗೆ ಹೋಗುವಂತಿಲ್ಲ. ಯಾವುದೇ ಕಾರಣಕ್ಕೂ ಮಸೀದಿ ಬಳಿ ಮೆರವಣಿಗೆ ಹೋಗಬಾರದು, ಅಲ್ಲಿ ಪಟಾಕಿ ಸಿಡಿಸಿ, ಕುಣಿದು ಘೋಷಣೆ ಕೂವಂತದ್ದು ಆಗಬಾರದು. ಪೊಲೀಸರು ಯಾವ ಮಾರ್ಗದಲ್ಲಿ ಹೋಗಬೇಕೆಂದು ಸೂಚಿಸುತ್ತಾರೋ ಅದೇ ಮಾರ್ಗದಲ್ಲಿ ಮೆರವಣಿಗೆ ಸಾಗಬೇಕು. ನಮ್ಮ ಆಚರಣೆ ನೋಡಿ ಬೇರೆಯವರು ಗೌರವ ಕೊಡಬೇಕು ಹೊರತು ಗಲಾಟೆಗಳಾಗಬಾರದು. ನಮ್ಮ ಧರ್ಮ ನಮಗೆ ಹೆಚ್ಚು, ಅವರ ಧರ್ಮ ಅವರಿಗೆ ಹೆಚ್ಚು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಘಟನೆ ನಡೆದರೆ ಮಾತನಾಡಲ್ಲ, ಮಾಡಿ ತೋರಿಸುತ್ತೇವೆ. ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಗದರಿದ್ದರು.
ಇನ್ಸ್‌ಪೆಕ್ಟರ್ ಧನಂಜಯ್ ಅವರ ಎಚ್ಚರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇನ್ಸ್ ಪೆಕ್ಟರ್ ಅಮಾಯಕ ಯುವಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಹಬ್ಬ ಆಚರಿಸಲು ನಮಗೆ ಧಮ್ಕಿ ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.
ಮತ್ತೊಂದೆಡೆ ಮಾಜಿ ಸಂಸದ ಪ್ರತಾಪ್ ಸಿಂಹ ಇನ್ಸ್ ಪೆಕ್ಟರ್ ಧನಂಜಯ್ ಅಮಾಯಕರ ಮುಂದೆ ಪೌರುಷ ತೋರಿಸುವ ಬದಲು ನಾನು ಅಲ್ಲಿಗೆ ಬರುತ್ತೇನೆ. ನನ್ನ ಮೇಲೆ ತೋರಿಸಲಿ. ಇನ್ನೊಮ್ಮೆ ಇನ್ಸ್ ಪೆಕ್ಟರ್ ಬಾಯಿಂದ ಇಂತಹ ಮಾತುಗಳು ಬಂದರೆ ಪೊಲೀಸ್ ಠಾಣೆಗೆ ನುಗ್ಗುತ್ತೇವೆ ಎಂದು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇನ್ಸ್ ಪೆಕ್ಟರ್ ಧನಂಜಯ್ ಅಮಾನತಿಗೆ ಒತ್ತಾಯಿಸಿದ್ದಾರೆ.
ಭಕ್ತಿಭಾವದಿಂದ ಹಬ್ಬ ಆಚರಿಸಲು ಬಂದ ಯುವಕರಿಗೆ ಸಾರ್ವಜನಿಕವಾಗಿ ಇನ್ಸ್‌ಪೆಕ್ಟರ್ ಧಮ್ಕಿ ಹಾಕಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಕಿಡಿಕಾರಿದ್ದಾರೆ. ನಮ್ಮದೇ ದೇಶದಲ್ಲಿ, ನಮ್ಮದೇ ನೆಲದಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಹಿಂದೂಗಳು ಗೋಗರೆಯಬೇಕಾದ ಪರಿಸ್ಥಿತಿ ರಾಜ್ಯದಲ್ಲಿದೆ ಎಂದರೆ ಇದಕ್ಕಿಂತ ದುರ್ದೈವದ ಸಂಗತಿ ಇನ್ನೊಂದಿಲ್ಲ!
ಮೈಸೂರಿನ ಟಿ. ನರಸೀಪುರದ ಇನ್ಸ್‌ಪೆಕ್ಟರ್, ಗಣೇಶ ಸಮಿತಿಯ ಯುವಕರಿಗೆ ಸಾರ್ವಜನಿಕವಾಗಿ ಧಮ್ಕಿ ಹಾಕುವಷ್ಟು ಧೈರ್ಯ ನೀಡಿದವರು ಯಾರು? ಇದು ಪೊಲೀಸ್ ಇಲಾಖೆಗೆ ಗೃಹ ಸಚಿವರು ನೀಡಿದ ಅಧಿಕಾರವೋ ಅಥವಾ ಡಿ.ಕೆ. ಶಿವಕುಮಾರ್ ಅವರ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ರಾಜಕಾರಣದ ಫರ್ಮಾನಾ? ಎಂದು ಪ್ರಶ್ನಿಸಿದ್ದಾರೆ.
ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಯೇ ಒಂದು ಸಮುದಾಯದ ಏಜೆಂಟ್‌ನಂತೆ ವರ್ತಿಸಿ, ಬೆದರಿಸುತ್ತಿರುವುದು ಅಕ್ಷಮ್ಯ ಅಪರಾಧ. ಭಕ್ತಿಭಾವದಿಂದ ಹಬ್ಬ ಆಚರಿಸಲು ಬಂದ ಯುವಕರಿಗೆ ಬೆದರಿಕೆ ಹಾಕಿರುವ ಇನ್ಸ್‌ಪೆಕ್ಟರ್ ಧನಂಜಯ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.
ಕಾನೂನು ಮತ್ತು ಸುವ್ಯವಸ್ಥೆಯ ನೆಪವೊಡ್ಡಿ ಹಿಂದೂ ಹಬ್ಬಗಳ ಆಚರಣೆಯನ್ನೇ ಹತೋಟಿ ಮಾಡಲು ಹೊರಟಿರುವುದು ಈ ಸರ್ಕಾರದ ಹಿಂದೂ ವಿರೋಧಿ ಧೋರಣೆಗೆ ಹಿಡಿದ ಕನ್ನಡಿ. ನಮ್ಮ ಸನಾತನ ಸಂಸ್ಕೃತಿ, ಆಚರಣೆ ಹಾಗೂ ಭಕ್ತಿಭಾವದ ಮೇಲೆ ಧಕ್ಕೆ ತರಲು ಯತ್ನಿಸಿದರೆ ಅದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ! ಎಂದು ಗುಡುಗಿದ್ದಾರೆ.
https://www.facebook.com/share/p/19LPp7UuCR




