
ಗಂಗಾಜಲವನ್ನು ಹೊತ್ತು ಸಾಗಿದ 500 ಯುವ ಬೈಕ್ ರೈಡರ್ಸ್
ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಸಂಸದೀಯ ಕ್ಷೇತ್ರ ಕಾಶಿಯಿಂದ ಹುಟ್ಟೂರು ವಡ್ನಗರದವರೆಗೆ ಬೃಹತ್ ‘ಸೇವಾ ಸಂಕಲ್ಪ’ ಬೈಕ್ ಯಾತ್ರೆಗೆ ಚಾಲನೆ ನೀಡಲಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇವಾ ಕಂಕಲ್ಪ ಬೈಕ್ ಯಾತ್ರೆಗೆ ಚಾಲನೆ ನೀಡಿದರು. ಈ ಯಾತ್ರೆಯಲ್ಲಿ, 500 ಯುವ ಬೈಕರ್‌ಗಳು ಗಂಗಾಜಲವನ್ನು ಹೊತ್ತು 10 ರಾಜ್ಯಗಳ 1,159ಕ್ಕೂ ಹೆಚ್ಚು ಹಳ್ಳಿಗಳ ಮೂಲಕ ಸಾಗಲಿದ್ದಾರೆ.
ಯಾತ್ರೆಯ ಆರಂಭಕ್ಕೂ ಮುನ್ನ 51 ಬೈಕ್ ಸವಾರರು ಕಾಶಿಯ ಲಲಿತಾ ಘಾಟ್‌ನಲ್ಲಿ ಶಂಖನಾದ ಹಾಗೂ ಡಮರು ವಾದ್ಯಗಳ ನಡುವೆ ಪವಿತ್ರ ಗಂಗಾಜಲವನ್ನು ಸಂಗ್ರಹಿಸಿದರು. ಬಳಿಕ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಗಂಗಾಜಲದಿಂದ ಮಹಾ ರುದ್ರಾಭಿಷೇಕ ನೆರವೇರಿಸಿ, ಪ್ರಧಾನಿ ಮೋದಿಯವರ ಆಯುರಾರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7 ರವರೆಗೆ ನಡೆಯುವ ಈ ಬೈಕ್ ಯಾತ್ರೆಯು ಸುಮಾರು 40 ಸಾವಿರ ಕಿ.ಮೀ ದೂರವನ್ನು ಕ್ರಮಿಸಲಿದೆ. ಇದು 10 ರಾಜ್ಯಗಳು,193 ಜಿಲ್ಲೆಗಳು, 773 ತಾಲೂಕುಗಳು ಹಾಗೂ 1159 ಹಳ್ಳಿಗಳ ಮೂಲಕ ಹಾದುಹೋಗಲಿದೆ. ಉತ್ತರ ಪ್ರದೇಶವೊಂದರಲ್ಲೇ 50 ಜಿಲ್ಲೆಗಳನ್ನು ಇದು ಒಳಗೊಂಡಿದೆ.
ಕಾಶಿಯಿಂದ ಹೊರಟ ಯಾತ್ರಿಕರು ಗಂಗಾಜಲವನ್ನು ವಡ್ನಗರದ ಶ್ರೀ ಹಾಟಕೇಶ್ವರ ಮಹಾದೇವ ಮಂದಿರಕ್ಕೆ ಕೊಂಡೊಯ್ಯುತ್ತಾರೆ. ಅತ್ತ ಗುಜರಾತ್‌ನ ವಡ್ನಗರದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಆರಂಭವಾದ ಮತ್ತೊಂದು ಬೈಕ್ ಯಾತ್ರೆಯು ಗುಜರಾತ್‌ನ ನದಿಗಳ ಪವಿತ್ರ ಜಲವನ್ನು ಹೊತ್ತು ಕಾಶಿಯತ್ತ ಸಾಗುತ್ತಿದೆ.
ಐತಿಹಾಸಿಕ ಸಮಾರಂಭದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಯುಪಿ ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.




