*ಚವಾಟಗಲ್ಲಿಯಲ್ಲಿ ಸ್ಫೋಟ ಪ್ರಕರಣದಲ್ಲಿ ಆರು ಜನರು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಚವಾಟಗಲ್ಲಿಯ ಡೋರಗಲ್ಲಿಯಲ್ಲಿ ಗಣೇಶೋತ್ಸವ ಸಂಭ್ರಮದಲ್ಲಿದ್ದ ಕುಟುಂಬವೊಂದರ ಆರು ಜನರು ಫ್ರಿಡ್ಜ್ ಸ್ಫೋಟಗೊಂಡು ಮೃತಪಟ್ಟಿರುವ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಸೆ.14ರಂದು ತಡರಾತ್ರಿ ಫ್ರಿಡ್ಜ್ ಸ್ಫೋಟದಿಂದ ಸಂಭವಿಸಿದ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದು, ಸ್ಫೋಟಕ್ಕೂ ಮುನ್ನ ಅಪರಿಚಿತ ವ್ಯಕ್ತಿಯೊಬ್ಬ ಬಕೆಟ್ ಹಿಡಿದುಕೊಂಡು ಧಮೋನೆ ಕುಟುಂಬದ ಮನೆಯ ಶೆಡ್ ಬಳಿ ಬಂದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ದುರಂತ ಸಂಭವಿಸಿ ಏಳು ದಿನಗಳ ಬಳಿಕ ಧಮೋನೆ ಮನೆಯ ಪಕ್ಕದ ಮನೆಯ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ, ಅಪರಿಚಿತ ವ್ಯಕ್ತಿಯೊಬ್ಬ ಬಕೆಟ್ ಹಿಡಿದುಕೊಂಡು ಶೆಡ್ ಬಳಿ ಬಂದು, ಸುಮಾರು ನಾಲ್ಕೈದು ನಿಮಿಷಗಳ ಬಳಿಕ ಖಾಲಿ ಕೈಯಲ್ಲಿ ಅಲ್ಲಿಂದ ಓಡಿ ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ದೃಶ್ಯಗಳು ಪ್ರಕರಣದ ತನಿಖೆಯಲ್ಲಿ ಮಹತ್ವ ಪಡೆದುಕೊಂಡಿವೆ. ಸ್ಫೋಟಕ್ಕೂ ಮುನ್ನ ವ್ಯಕ್ತಿಯ ಚಲನವಲನಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಆದರೆ, ಸಿಸಿ ಕ್ಯಾಮರಾದಲ್ಲಿ ಕಂಡುಬರುವ ವ್ಯಕ್ತಿಗೂ ಸ್ಫೋಟಕ್ಕೂ ನೇರ ಸಂಬಂಧವಿದೆಯೇ ಎಂಬುದು ಪೊಲೀಸ್ ತನಿಖೆಯಿಂದಲೇ ಖಚಿತವಾಗಬೇಕಿದೆ.
ಫ್ರಿಡ್ಜ್ ಸ್ಫೋಟದಲ್ಲಿ ಶಾರದಾ ಗಜಾನನ ಧಮೋನೆ, ಭಾರತಿ ರಾಜಾರಾಮ ಧಮೋನೆ, ಪ್ರಿಯಾ ಗಜಾನನ ಧಮೋನೆ ಹಾಗೂ ಗಂಗಾ ಗಜಾನನ ಧಮೋನೆ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಗಜಾನನ ರಾಜಾರಾಮ ಧಮೋನೆ ಹಾಗೂ ರೋಷನ್ ಗಜಾನನ ಧಮೋನೆ ಅವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಅಪರಿಚಿತ ವ್ಯಕ್ತಿ ಬಗ್ಗೆಯೂ ಶೋಧ ನಡೆಸಲಾಗುತ್ತಿದೆ.


