*ಬೋರ್ವೆಲ್ಗಳ ದುರಸ್ತಿಗೆ ಮುಂದಾದ ಶಾಸಕ ಆಸಿಫ್ ಸೇಠ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ 30–40 ವರ್ಷಗಳಿಂದ ಕೆಟ್ಟು ಬಳಕೆಯಲ್ಲಿರದ ಬೋರ್ವೆಲ್ಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಮತ್ತೆ ನೀರಿನ ಸೌಲಭ್ಯ ಕಲ್ಪಿಸುವ ಕಾರ್ಯವನ್ನು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇಠ್ ಅವರು ಕೈಗೊಂಡಿದ್ದಾರೆ.
ಗುತ್ತಿಗೆದಾರ ಸುರೇಶ್ ಖಿರಾಯಿ ಅವರ ಮೂಲಕ ಬೋರ್ವೆಲ್ಗಳನ್ನು ದುರಸ್ತಿಗೊಳಿಸಿ, ಅವುಗಳಿಗೆ ಮೋಟರ್ ಹಾಗೂ ಹ್ಯಾಂಡ್ಪಂಪ್ಗಳನ್ನು ಅಳವಡಿಸಿ ಮತ್ತೆ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ತಮ್ಮ ಪ್ರದೇಶದಲ್ಲೇ ನೀರಿನ ಸೌಲಭ್ಯ ದೊರೆಯುವಂತಾಗಿದೆ.
ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಬೋರ್ವೆಲ್ಗಳಿಗೆ ಮರುಜೀವ ನೀಡಿರುವ ಶಾಸಕ ರಾಜು ಸೇಠ್ ಅವರ ಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜು ಸೇಠ್ ಅವರು, ಇನ್ನೂ ಹಲವು ವಾರ್ಡ್ಗಳಲ್ಲಿ ಹಲವು ವರ್ಷಗಳಿಂದ ಬಳಕೆಯಲ್ಲಿಲ್ಲದೆ ಸ್ಥಗಿತಗೊಂಡಿರುವ ಬೋರ್ವೆಲ್ಗಳನ್ನು ಗುರುತಿಸಿ, ಹಂತ ಹಂತವಾಗಿ ದುರಸ್ತಿಗೊಳಿಸಿ ಜನರಿಗೆ ನೀರಿನ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.
ಈ ವರ್ಷದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದ ಹಿನ್ನೆಲೆಯಲ್ಲಿ, ಲಭ್ಯವಿರುವ ನೀರನ್ನು ಜನರು ಮಿತವಾಗಿ ಬಳಸಬೇಕು ಹಾಗೂ ನೀರನ್ನು ವ್ಯರ್ಥ ಮಾಡಬಾರದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜನರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಶಾಸಕ ರಾಜು ಸೇಠ್ ತಿಳಿಸಿದರು.




