*ಜೈಲಿನಲ್ಲಿ ಐವರು ಸಜಾಬಂಧಿಗಳಿರುವ ಕೊಠಡಿಗೆ ಪವಿತ್ರಾ ಗೌಡ ಶಿಫ್ಟ್*
Pavithra Gowda shifted to room with five convicts bail plea hearing today

ಇಂದು ಜಾಮೀನು ಅರ್ಜಿ ವಿಚಾರಣೆ
ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಐವರು ಸಜಾಬಂಧಿಗಳು ಇರುವ ಬ್ಯಾರಕ್ಗೆ ಸ್ಥಳಾಂತರಿಸಲಾಗಿದೆ. ಸೆಷನ್ಸ್ ಕೋರ್ಟ್ ನೀಡಿದ ಸೂಚನೆಯಂತೆ ಜೈಲು ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ಪವಿತ್ರಾ ಗೌಡ ಅವರನ್ನು ಹಲವು ಕೈದಿಗಳು ಇರುವ ಬ್ಯಾರಕ್ನಲ್ಲಿ ಇರಿಸಲಾಗಿತ್ತು.
ಹಲವು ಅಪರಾಧಿಗಳೊಂದಿಗೆ ಒಂದೇ ಶೌಚಾಲಯ ಬಳಸಬೇಕಾಗಿದ್ದು, ಬ್ಯಾರಕ್ನಲ್ಲಿ ನಡೆಯುತ್ತಿರುವ ಪರಿಶೀಲನೆ ಸೇರಿದಂತೆ ಹಲವು ಕಾರಣಗಳಿಂದ ತೊಂದರೆಯಾಗುತ್ತಿದೆ ಎಂದು ಪವಿತ್ರಾ ಗೌಡ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸೌಲಭ್ಯ ಹಾಗೂ ಸ್ವಚ್ಛತೆ ಇರುವ ಬ್ಯಾರಕ್ಗೆ ವರ್ಗಾವಣೆ ಮಾಡುವಂತೆ ಅವರು ಮನವಿ ಮಾಡಿದ್ದರು.
ಅರ್ಜಿಯನ್ನು ಪರಿಗಣಿಸಿದ ಕೋರ್ಟ್, ಪವಿತ್ರಾ ಗೌಡ ಅವರನ್ನು ಸೌಲಭ್ಯ ಇರುವ ಬ್ಯಾರಕ್ಗೆ ವರ್ಗಾಯಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿತ್ತು. ಇದರಂತೆ ಜೈಲು ಮ್ಯಾನ್ಯುವಲ್ ಪ್ರಕಾರ ಇದೀಗ ಐವರು ಸಜಾಬಂಧಿಗಳು ಇರುವ ಬ್ಯಾರಕ್ಗೆ ಅವರನ್ನು ಸ್ಥಳಾಂತರಿಸಲಾಗಿದೆ.
ಇದೇ ವೇಳೆ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದ್ದು, ಜಾಮೀನು ದೊರೆಯುತ್ತದೆಯೇ ಎಂಬ ಕುತೂಹಲ ಮೂಡಿದೆ. ಬೆಂಗಳೂರಿನ ಸಿಸಿಎಚ್ 59ರ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್ನ ಆದೇಶದ ಬಳಿಕ ಇದೇ ಮೊದಲ ಬಾರಿಗೆ ಪವಿತ್ರಾ ಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅವರ ಜೊತೆಗೆ ಪ್ರಕರಣದ ಮತ್ತಿಬ್ಬರು ಆರೋಪಿಗಳ ಜಾಮೀನು ಅರ್ಜಿಗಳೂ ಇಂದು ವಿಚಾರಣೆಗೆ ಬರಲಿವೆ.



