
ಪ್ರಗತಿವಾಹಿನಿ ಸುದ್ದಿ: ಪೌರಾಣಿಕ ಧಾರಾವಾಹಿ‘ಮಹಾಭಾರತದಲ್ಲಿ ಭೀಮನ ಪಾತ್ರದ ಮೂಲಕ ಮನೆಮಾತಾಗಿದ್ದ ನಟ ಹಾಗೂ WWE ಖ್ಯಾತಿಯ ಕುಸ್ತಿಪಟು ಸೌರವ್ ಗುರ್ಜರ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಮತ್ತು ವಂಚನೆ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಸೌರವ್ ಗುರ್ಜರ್ ನನ್ನು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ.
29 ವರ್ಷದ ಯುವತಿಯೊಬ್ಬರು ನೀಡಿದ ದೂರಿನನ್ವಯ ಹೈದರಾಬಾದ್ನ ಗಚಿಬೌಲಿ ಠಾಣಾ ಪೊಲೀಸರು ಸೌರವ್ ಗುರ್ಜರ್ ಅವರನ್ನು ಬಂಧಿಸಿದ್ದಾರೆ. ಈ ಬಂಧನ ಸೆಪ್ಟೆಂಬರ್ 17ರಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಾದ ಬೆನ್ನಲ್ಲೇ ಸೌರವ್ ಗುರ್ಜರ್ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ (LOC) ಜಾರಿ ಮಾಡಿದ್ದರು. ಸೆಪ್ಟೆಂಬರ್ 17ರಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶ ಬಿಟ್ಟು ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ, ವಲಸೆ ಅಧಿಕಾರಿಗಳು ಹಾಗೂ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಬಳಿಕ ಆರೋಪಿಯನ್ನು ಮುಂಬೈನಿಂದ ಹೈದರಾಬಾದ್ಗೆ ಕರೆತರಲಾಯಿತು.
ವಿಚಾರಣೆ ನಡೆಸಿದ ಪೊಲೀಸರು, ಸೆಪ್ಟೆಂಬರ್ 20 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಸದ್ಯ ಸೌರವ್ ಜೈಲು ಪಾಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಕುಸ್ತಿಪಟುವಾಗಿರುವ ಗುರ್ಜರ್ ಖಾಸಗಿ ವಾಹಿನಿಯ ಜನಪ್ರಿಯ ‘ಮಹಾಭಾರತ’ ಧಾರಾವಾಹಿಯಲ್ಲಿ ‘ಭೀಮ’ನ ಪಾತ್ರ ನಿರ್ವಹಿಸುವ ಮೂಲಕ ಭಾರಿ ಜನಪ್ರಿಯತೆ ಪಡೆದಿದ್ದರು.



