*ಯಲ್ಲಮ್ಮನಗುಡ್ಡದಲ್ಲಿ ಮುಂದುವರಿದ ದಾಳಿ: ಅಧಿಕಾರಿಗಳು, ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸವದತ್ತಿ ತಾಲ್ಲೂಕಿನ ಪ್ರಸಿದ್ಧ ಯಲ್ಲಮ್ಮನಗುಡ್ಡದಲ್ಲಿ ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆ ಅಧಿಕಾರಿಗಳ ತಪಾಸಣೆ ಸೋಮವಾರವೂ ಮುಂದುವರಿಯಿತು.
ಸತತ ಎರಡನೇ ದಿನ ನಡೆದ ಕಾರ್ಯಾಚರಣೆಯಲ್ಲಿ ವಿವಿಧ ಅಕ್ರಮಗಳು ಪತ್ತೆಯಾಗಿದ್ದು, 9 ಅಂಗಡಿ ಮಾಲೀಕರು ಹಾಗೂ ದೇವಸ್ಥಾನದ ಇಬ್ಬರು ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.
ದಾಳಿ ವೇಳೆ ತಲೆನೋವು, ಶೀತ, ವಾಂತಿ, ಭೇದಿ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಬಳಸುವ ಮಾತ್ರೆಗಳು ಪತ್ತೆಯಾಗಿವೆ. ಅಲ್ಲದೆ, ಅವಧಿ ಮೀರಿದ ತಂಪು ಪಾನೀಯಗಳು ಹಾಗೂ ಆಹಾರ ಪೊಟ್ಟಣಗಳನ್ನು ವಶಕ್ಕೆ ಪಡೆಯಲಾಗಿದೆ.
ವಾಣಿಜ್ಯ ಸಂಕೀರ್ಣದಲ್ಲಿರುವ ಕೆಲವು ಹೋಟೆಲ್‌ಗಳು ಹಾಗೂ ಸಿಹಿತಿಂಡಿ ಅಂಗಡಿಗಳಲ್ಲಿ ಸ್ವಚ್ಛತೆ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಮಾಲೀಕರಿಗೂ ನೋಟಿಸ್ ನೀಡಲಾಗಿದೆ. ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ನೋಟಿಸ್ ಜಾರಿ
ಅನಧಿಕೃತ ವ್ಯಾಪಾರ ಚಟುವಟಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ದೇವಸ್ಥಾನದ ಇಬ್ಬರು ಸಿಬ್ಬಂದಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಸಂಬಂಧಿಸಿದ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದಲೂ ಸ್ಪಷ್ಟನೆ ಪಡೆಯಲಾಗಿದೆ.
ಕಠಿಣ ಕ್ರಮದ ಎಚ್ಚರಿಕೆ
ಯಲ್ಲಮ್ಮನಗುಡ್ಡದಲ್ಲಿ ₹215 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ‘ಸ್ವಚ್ಛ ಯಲ್ಲಮ್ಮನಗುಡ್ಡ’ ನಿರ್ಮಾಣಕ್ಕೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಯಲ್ಲಮ್ಮನಗುಡ್ಡಕ್ಕೆ ಕೋಟ್ಯಂತರ ಭಕ್ತರು ನಂಬಿಕೆಯಿಂದ ಆಗಮಿಸುತ್ತಾರೆ. ಭಕ್ತರಿಗೆ ಯಾವುದೇ ರೀತಿಯ ವಂಚನೆ ಅಥವಾ ಅನ್ಯಾಯವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಭಕ್ತರ ಆರೋಗ್ಯಕ್ಕೆ ಧಕ್ಕೆ ಉಂಟುಮಾಡುವಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ತಪಾಸಣಾ ಕಾರ್ಯ ಮುಂದುವರಿಯಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಅಗತ್ಯವಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.



