Kannada NewsLatestWorld

*ALERT: ಸೂಪರ್ ಎಲ್ ನಿನೋ: ಆಘಾತಕಾರಿ ವರದಿ ಬಿಡುಗಡೆ ಮಾಡಿದ ಕ್ಲೈಮೇಟ್​ ಇಂಪ್ಯಾಕ್ಟ್​ ಲ್ಯಾಬ್*

ಪ್ರಗತಿವಾಹಿನಿ ಸುದ್ದಿ: ಈ ಭಾರಿ ಜಗತ್ತಿಗೆ ಸೂಪರ್ ಎಲ್ ನಿನೋ ಪರಿಣಾಮ ಭಾರಿ ವಿನಾಶವನ್ನು ಉಂಟು ಮಾಡಲಿದೆ. ಆರಂಭದಲ್ಲಿಯೇ ಭೀಕರ ಬರಗಾಲ ವಿಪರೀತ ತಾಪಮಾನ, ಸೆಖೆಯಿಂದ ಜನರು ತತ್ತರಿಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಭೂಮಿ ಮತ್ತಷ್ಟು ಕಾದ ಕಾವಲಿಯಂತಾಗಲಿದೆ. ಈ ಬಗ್ಗೆ ಕ್ಲೈಮೇಟ್​ ಇಂಪ್ಯಾಕ್ಟ್​ ಲ್ಯಾಬ್ ಆಘಾತಕಾರಿ ವರದಿ ಬಿಡುಗಡೆ ಮಾಡಿದೆ.

ಸೂಪರ್​ ಎಲ್​ ನಿನೋ ಈ ಬಾರಿ ಅನಾಹುತ ಸೃಷ್ಟಿಸುವ ಆತಂಕವಿದೆ. ಈಗಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದರೆ, ಮೊದಲಾರ್ಧದಲ್ಲಿಯೇ ವಿಪರೀತ ಶಾಖದಿಂದ 4 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಬಹುದು ಎಂದು ಕ್ಲೈಮೇಟ್​ ಇಂಪ್ಯಾಕ್ಟ್​ ಲ್ಯಾಬ್​ ವರದಿಯಲ್ಲಿ ತಿಳಿಸಲಾಗಿದೆ.

ಹೆಚ್ಚುತ್ತಿರುವ ತಾಪಮಾನದಿಂದ ಉಂಟಾಗಬಹುದಾದ ಆರೋಗ್ಯ ಪರಿಸ್ಥಿತಿಯನ್ನು ಈ ವರದಿ ಸೂಚಿಸಿದೆ. ತುರ್ತು ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾವಿರಾರು ಜೀವಗಳನ್ನು ಉಳಿಸಬಹುದಾದ ಪ್ರದೇಶಗಳನ್ನೂ ಅದು ಗುರುತಿಸಿದೆ.

ಉತ್ತರ ಗೋಳಾರ್ಧದಲ್ಲಿ ಮುಂಬರುವ ವಸಂತಕಾಲದವರೆಗೂ ಎಲ್ ನಿನೋ ಪ್ರಭಾವ ಮುಂದುವರಿಯುವ ಸಾಧ್ಯತೆ ಇದೆ. ಇದರಿಂದ ಜಾಗತಿಕ ಭೂಪ್ರದೇಶದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ 1.2 ಡಿಗ್ರಿ ಸೆಲ್ಸಿಯಸ್​ ಹೆಚ್ಚಿರಲಿದೆ ಎಂದು ವರದಿ ಅಂದಾಜಿಸಿದೆ. ಈ ಅಸಾಮಾನ್ಯ ಉಷ್ಣ ಪರಿಸ್ಥಿತಿಯಿಂದ ಸಾಮಾನ್ಯಕ್ಕಿಂತ ಶೇಕಡಾ 44 ರಷ್ಟು ಹೆಚ್ಚು ಅತ್ಯಧಿಕ ಉಷ್ಣ ದಿನಗಳನ್ನು ಎದುರಿಸಬೇಕಾಗಬಹುದು ಎಂದಿದೆ.

ಸೆಪ್ಟೆಂಬರ್ 2026 ರಿಂದ ಫೆಬ್ರವರಿ 2027 ರವರೆಗಿನ ಮುಂದಿನ 4 ತಿಂಗಳಲ್ಲಿ, ಜಾಗತಿಕವಾಗಿ ಶಾಖದ ಅಲೆಗೆ 2,39,000 ಮಂದಿ ಸಾವಿಗೀಡಾಗಬಹುದು. ಒಂದು ವೇಳೆ ಎಲ್​ ನಿನೊ 2027ರ ವಸಂತಕಾಲದವರೆಗೂ ಮುಂದುವರಿದು ಜೂನ್​ ಅಥವಾ ಜುಲೈನಲ್ಲಿಯೂ ತಾಪಮಾನ ಹೆಚ್ಚಿಸಿದರೆ ಸಾವಿನ ಒಟ್ಟು ಸಂಖ್ಯೆ ಇನ್ನೂ ಜಾಸ್ತಿಯಾಗಬಹುದು ಎಂದು ವರದಿ ಎಚ್ಚರಿಸಿದೆ.

ಈ ಕುರಿತು ಮಾತನಾಡಿರುವ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್‌ನ ಸಹ ಸಂಸ್ಥಾಪಕ ಮತ್ತು ಚಿಕಾಗೋ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಮೈಕೆಲ್ ಗ್ರೀನ್‌ಸ್ಟೋನ್, ಬೆಳೆಗಳ ಮೇಲೆ ತಾಪಮಾನದ ಪರಿಣಾಮಗಳನ್ನು ನಾವು ದೀರ್ಘಕಾಲದಿಂದ ಊಹಿಸುತ್ತಾ ಬಂದಿದ್ದೇವೆ. ಆದರೆ, ಈಗ ನಾವು ಅತ್ಯಂತ ಕೆಟ್ಟ ಸ್ಥಿತಿಯಾದ ಸಾವಿನ ಬಗ್ಗೆಯೂ ಊಹಿಸಬೇಕಾಗಿದೆ. ಎಲ್ ನಿನೋ ಕಾರಣದಿಂದಾಗಿ ಮುಂಬರುವ ದಿನಗಳಲ್ಲಿ 4,51,000 ಜನರು ಸಾವನ್ನಪ್ಪಬಹುದು ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.

ಸೂಪರ್ ಎಲ್ ನಿನೋದಿಂದ ‘ಗ್ಲೋಬಲ್ ಸೌತ್’ (ಅಭಿವೃದ್ಧಿಶೀಲ ರಾಷ್ಟ್ರಗಳಿರುವ ಪ್ರದೇಶಗಳು) ಅತಿ ಹೆಚ್ಚು ಪರಿಣಾಮವನ್ನು ಎದುರಿಸುವ ಸಾಧ್ಯತೆಯಿದೆ. ಸೆಪ್ಟೆಂಬರ್ ಮತ್ತು ಫೆಬ್ರವರಿ ನಡುವೆ ನೈಜೀರಿಯಾದಲ್ಲಿ ಸುಮಾರು 31,400 ಶಾಖ ಸಂಬಂಧಿತ ಸಾವುಗಳು ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ನಂತರದಲ್ಲಿ ಇಂಡೋನೇಷ್ಯಾ (19,300), ಸುಡಾನ್ (17,500), ಭಾರತ (15,800) ಮತ್ತು ಬ್ರೆಜಿಲ್ (13,300) ಇರಲಿವೆ.

ಡಿಸೆಂಬರ್ ಮತ್ತು ಫೆಬ್ರವರಿ ನಡುವೆ ಭಾರತ ಮತ್ತು ಬ್ರೆಜಿಲ್ ಕ್ರಮವಾಗಿ 7,400 ಮತ್ತು 8,000 ಶಾಖ ಸಂಬಂಧಿತ ಹೆಚ್ಚುವರಿ ಸಾವುಗಳನ್ನು ಎದುರಿಸುವ ಸಾಧ್ಯತೆ ಇದೆ. ಇದಲ್ಲದೇ, ಭಾರತ ಮತ್ತು ಪಾಕಿಸ್ತಾನದಲ್ಲಿ ಶಾಖ ಸಂಬಂಧಿತ ಸಾವುಗಳು 6 ತಿಂಗಳ ಮುನ್ಸೂಚನೆಯ ಅವಧಿಯನ್ನು ಮೀರಿ ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹವಾಮಾನ ಇಂಪ್ಯಾಕ್ಟ್ ಲ್ಯಾಬ್ ಹೇಳುವಂತೆ, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳಿಂದ ಈ ಸಾವುಗಳನ್ನು ಕಡಿಮೆ ಮಾಡಬಹುದು. ಶಾಖದ ಎಚ್ಚರಿಕೆಗಳು, ಕೂಲಿಂಗ್​ ಕೇಂದ್ರಗಳು, ಕುಡಿಯುವ ನೀರಿನ ವ್ಯವಸ್ಥೆ, ದುರ್ಬಲ ಜನರಿಗೆ ಆರೋಗ್ಯ ನೆರವು, ಹೊರಾಂಗಣ ಕೆಲಸಗಾರರಿಗೆ ರಕ್ಷಣೆ ಮತ್ತು ಬಲವಾದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ರೂಪಿಸುವುದು ಅಗತ್ಯವಾಗಿದೆ. ಭವಿಷ್ಯದಲ್ಲಿ ಸಂಭವಿಸಲಿರುವ ಭೀಕರತೆ ತಪ್ಪಿಸಲು ಈಗಲೇ ಎಚ್ಚೆತ್ತು ಮುನ್ನೆಚ್ಚರಿಕೆ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ವರದಿ ತಿಳಿಸಿದೆ.

Related Articles

Back to top button