CrimeKannada NewsKarnataka NewsLatest

ಡೀಪ್ ಫೇಕ್ ಬಗ್ಗೆ ಇರಲಿ ಎಚ್ಚರ: ಮೋದಿ, ಅಂಬಾನಿ ಡೀಪ್ ಫೇಕ್ ವಿಡಿಯೋ ನಂಬಿ ಹೂಡಿಕೆ: ಲಕ್ಷ ಲಕ್ಷ ಹಣ ಕಳೆದುಕೊಂಡ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ: ಸೈಬರ್ ವಂಚಕರು ಹಣ ದೋಚಲು ದಿನಕ್ಕೊಂದು ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಇದೀಗ ಡೀಪ್ ಫೇಕ್ ವಿಡಿಯೋಗಳನ್ನು ಬಳಸಿ ಅದನ್ನು ನೈಜ ವಿಡಿಯೋ ಎಂಬಂತೆ ಬಿಂಬಿಸಿ ಹೂಡಿಕೆ ಹೆಸರಲ್ಲಿ ಹಣ ದೋಚುತ್ತಿದ್ದಾರೆ.

ಡೀಪ್ ಫೇಕ್ ಮೂಲಕ ವಂಚಿಸುವ ಸೈಬರ್ ವಂಚಕರ ಜಾಲ ಸಕ್ರಿಯವಾಗಿದ್ದು, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಿವಾಸಿಯೊಬ್ಬರು ಇಂತದ್ದೇ ವಿಡಿಯೋ ನಂಬಿ ಹಣ ಕಳೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ ಹಾಗೂ ಅನಂತ್ ಅಂಬಾನಿ ಅವರ ಡೀಪ್‌ ಫೇಕ್ ವಿಡಿಯೋವನ್ನು ನೋಡಿದ ವ್ಯಕ್ತಿ ಅದನ್ನು ನಿಜವೆಂದು ನಂಬಿದ್ದಾರೆ. ಅದರಲ್ಲಿ ಸೂಚಿಸಿದಂತೆ ಹೂಡಿಕೆ ಮಾಡಿ ಲಕ್ಷ ಲಕ್ಷ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಜುಲೈ 10ರಂದು ಫೇಸ್‌ಬುಕ್‌ನಲ್ಲಿ ಇಂತದ್ದೊಂದು ವಿಡಿಯೋಗಳು ಕಾಣಿಸಿಕೊಂಡಿದ್ದವು. ಮೋದಿ ಸೇರಿದಂತೆ ಇತರರು ಆನ್‌ಲೈನ್ ಹೂಡಿಕೆಯನ್ನು ಪ್ರಚಾರ ಮಾಡುತ್ತಿರುವಂತೆ ವಿಡಿಯೋಗಳಲ್ಲಿ ತೋರಿಸಲಾಗಿತ್ತು. ವಿಡಿಯೋದಲ್ಲಿದ್ದ ಲಿಂಕ್‌ ಕ್ಲಿಕ್ ಮಾಡಿದ ವ್ಯಕ್ತಿ ಹೂಡಿಕೆ ಆರಂಭಿಸಲು 22,000 ರೂಪಾಯಿ ವರ್ಗಾಯಿಸಿದ್ದರು. ಬಳಿಕ ಯುನೈಟೆಡ್ ಕಿಂಗ್‌ಡಂನ +44 ಕಂಟ್ರಿ ಕೋಡ್ ಹೊಂದಿದ್ದ ಐದು ಅಪರಿಚಿತ ಮೊಬೈಲ್ ಸಂಖ್ಯೆಗಳ ಮೂಲಕ ಅವರಿಗೆ ಕರೆಗಳು ಬಂದಿದ್ದವು.

ಕರೆ ಮಾಡಿದವರು ತಮ್ಮನ್ನು ‘ಒನ್​​ ಟು ಮಾರ್ಕೆಟ್ಸ್​​’ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡು, ಫಾರೆಕ್ಸ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿದ್ದರಂತೆ. ಬಳಿಕ ವಂಚಕರು ವ್ಯಕ್ತಿಯ ಹೆಸರಿನಲ್ಲಿ ನಕಲಿ ಫಾರೆಕ್ಸ್ ಖಾತೆಯೊಂದನ್ನು ತೆರೆದಿದ್ದರು.

ಜುಲೈ 10ರಿಂದ ಜುಲೈ 22ರವರೆಗೆ ವಿವಿಧ ವಹಿವಾಟುಗಳ ಮೂಲಕ ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗಳಿಗೆ ವ್ಯಕ್ತಿ 7.6 ಲಕ್ಷ ರೂಪಾಯಿ ವರ್ಗಾಯಿಸಿದ್ದರು. ತಮ್ಮ ಹೂಡಿಕೆಯಿಂದ ಲಾಭ ಬರುತ್ತಿದೆ ಎಂಬ ನಂಬಿಕೆಯಲ್ಲಿದ್ದ ವ್ಯಕ್ತಿ, ಹಣವನ್ನು ಹಿಂಪಡೆಯಲು ಮುಂದಾಗಿದ್ದಾರೆ. ಈ ವೇಳೆ ವಂಚಕರು ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಹಣ ವಾಪಸ್ ಕೇಳಿದರೆ ಸರಿಯಾಗಿ ಸ್ಪಂದಿಸಿಲ್ಲ. ಮತ್ತಷ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದಂತೆ ವ್ಯಕ್ತಿಗೆ ಅನುಮಾನ ಬಂದಿದೆ. ಬಳಿಕ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೈಬರ್ ವಂಚಕರ ಜಾಲ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button