
ಪ್ರಗತಿವಾಹಿನಿ ಸುದ್ದಿ: ತಾಯಿಯನ್ನು ಕಳೆದುಕೊಂಡ ದುಃಖದ ನಡುವೆಯೂ ಇಬ್ಬರು ಪುಟ್ಟ ಮಕ್ಕಳೊಂದಿಗೆ ಪತಿ ಕೈಗೊಂಡ ನಿರ್ಧಾರ ಹಲವು ಜೀವಗಳಿಗೆ ಹೊಸ ಆಶಾಕಿರಣವಾಗಿದೆ. ಮೆದುಳು ನಿಷ್ಕ್ರಿಯಗೊಂಡ 39 ವರ್ಷದ ಮಹಿಳೆಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬ ಮಾನವೀಯತೆ ಮೆರೆದಿದೆ.
ಜಿಗಣಿ ಸಮೀಪದ ಹಾರಗದ್ದೆ ದ್ಯಾವಸಂದ್ರ ಗ್ರಾಮದ ನಿವಾಸಿ ಕುಸುಮಾ ಅವರ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬಸ್ಥರು ಹಲವರ ಬಾಳಿಗೆ ಬೆಳಕಾಗಿದ್ದಾರೆ. ಖಾಸಗಿ ಕಂಪನಿ ನಡೆಸುತ್ತಿದ್ದ ಜಯಶಂಕರ್ ಅವರ ಪತ್ನಿಯಾಗಿದ್ದ ಕುಸುಮಾ ಅವರಿಗೆ ಓರ್ವ ಪುತ್ರಿ ಮತ್ತು ಓರ್ವ ಪುತ್ರ ಇದ್ದಾರೆ.
ಕುಟುಂಬದೊಂದಿಗೆ ಮನೆಯಲ್ಲಿ ಸಮಯ ಕಳೆಯುತ್ತಿದ್ದ ವೇಳೆ ಕುಸುಮಾ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದೆ. ಹೃದಯಾಘಾತದಿಂದ ಕುಸಿದುಬಿದ್ದ ಅವರನ್ನು ಕೂಡಲೇ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರು ಚಿಕಿತ್ಸೆ ನೀಡಿದರೂ ಕುಸುಮಾ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಕುಟುಂಬಕ್ಕೆ ತಿಳಿಸಿದರು. ಈ ಕಠಿಣ ಸಂದರ್ಭದಲ್ಲಿ ಪತಿ ಜಯಶಂಕರ್ ಹಾಗೂ ಮಕ್ಕಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ತಾಯಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನ ಬಳಿಕವೂ ಹಲವು ಜೀವಗಳಿಗೆ ನೆರವಾಗಲಿ ಎಂದು ಕುಟುಂಬ ನಿರ್ಧರಿಸಿದೆ. ಅದರಂತೆ ಕುಸುಮಾ ಅವರ ಹೃದಯ, ಶ್ವಾಸಕೋಶ, ಲಿವರ್, ಕಿಡ್ನಿಗಳು ಹಾಗೂ ಕಣ್ಣುಗಳನ್ನು ದಾನ ಮಾಡಲಾಗಿದೆ.
ಅಂಗಾಂಗ ದಾನದ ಮೂಲಕ ಸುಮಾರು 7ರಿಂದ 8 ಜನರಿಗೆ ನೆರವಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ತಾಯಿಯನ್ನು ಕಳೆದುಕೊಂಡ ನೋವಿನ ನಡುವೆಯೂ ಕುಟುಂಬ ಕೈಗೊಂಡ ಈ ನಿರ್ಧಾರ ಅಂಗಾಂಗ ದಾನದ ಮಹತ್ವವನ್ನು ಮತ್ತೊಮ್ಮೆ ಸಾರಿದೆ.
ಕುಸುಮಾ ಅವರ ಅಂಗಾಂಗಗಳು ಅಗತ್ಯವಿರುವವರಿಗೆ ಹೊಸ ಬದುಕಿನ ಅವಕಾಶ ಕಲ್ಪಿಸುವ ಮೂಲಕ ಅವರ ಕುಟುಂಬದ ದುಃಖದ ನಡುವೆಯೂ ಹಲವು ಮನೆಗಳಿಗೆ ಆಶಾಕಿರಣವಾಗಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




