*ದರ್ಶನ್–ಪವಿತ್ರಾ ಗೌಡ ಹಾರ ಬದಲಾಯಿಸಿದ ವಿಡಿಯೋ ವೈರಲ್*: *ಗೃಹಪ್ರವೇಶದ ದೃಶ್ಯ ಮತ್ತೆ ಚರ್ಚೆಗೆ*

ಪ್ರಗತಿವಾಹಿನಿ ಸುದ್ದಿ: ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಹಳೆಯ ವಿಡಿಯೋವೊಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರೂ ಪೂಜಾ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕೆಲವು ದೃಶ್ಯಗಳಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡಿರುವುದೂ ಕಂಡು ಬಂದಿದ್ದು ಈ ವಿಡಿಯೋ ಇದೀಗ ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಸದ್ಯ ವೈರಲ್ ಆಗಿರುವ ವಿಡಿಯೋ 2018ರಲ್ಲಿ ರಾಜರಾಜೇಶ್ವರಿ ನಗರದಲ್ಲಿ ನಡೆದ ಪವಿತ್ರಾ ಗೌಡ ಅವರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದಾಗಿದೆ. ಕಾರ್ಯಕ್ರಮದಲ್ಲಿ ದರ್ಶನ್ ಭಾಗವಹಿಸಿದ್ದರು. ಪೂಜಾ ವಿಧಿವಿಧಾನಗಳ ಸಂದರ್ಭದ ದೃಶ್ಯಗಳು ವಿಡಿಯೋದಲ್ಲಿವೆ.
ವಿಶೇಷವಾಗಿ ದರ್ಶನ್ ಮತ್ತು ಪವಿತ್ರಾ ಗೌಡ ಪರಸ್ಪರ ಹಾರ ಬದಲಾಯಿಸಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಈ ಹಿಂದೆ ಇದೇ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಕಾರ್ಯಕ್ರಮದಲ್ಲಿ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಕೂಡ ಉಪಸ್ಥಿತರಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಪೂಜಾ ವಿಧಿವಿಧಾನಗಳಲ್ಲಿ ಅವರು ಭಾಗವಹಿಸಿರುವ ದೃಶ್ಯವೂ ವೈರಲ್ ಆಗಿರುವ ವಿಡಿಯೋದಲ್ಲಿದೆ. ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಸಂಬಂಧದ ಬಗ್ಗೆ ಮೀನಾ ಅವರಿಗೆ ಮೊದಲೇ ಎಲ್ಲವೂ ಗೊತ್ತಿದ್ದರು ಮೌನವಾಗಿ ಇದ್ದಿದ್ದು ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇನ್ನು, ಪವಿತ್ರಾ ಗೌಡ ಅವರ ಮನೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ವಿವಿಧ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸುಮಾರು ₹2 ಕೋಟಿ ಮೌಲ್ಯದ ಮನೆಯನ್ನು ದರ್ಶನ್ ಅವರು ಕೊಡಿಸಿದ್ದರು ಎಂಬ ಹೇಳಿಕೆಯೂ ಇದೆ. ಆದರೆ, ಈ ಮಾಹಿತಿಗೆ ಸಂಬಂಧಿಸಿದಂತೆ ಸ್ವತಂತ್ರ ಅಧಿಕೃತ ದೃಢೀಕರಣ ಲಭ್ಯವಿಲ್ಲ.
ಈ ಹಿಂದೆ ದರ್ಶನ್ ಮತ್ತು ಪವಿತ್ರಾ ಗೌಡ ಒಟ್ಟಿಗೆ ಕಾಣಿಸಿಕೊಂಡಿದ್ದ ಕೆಲವು ಖಾಸಗಿ ಫೋಟೋಗಳು ಕೂಡ ಸಾರ್ವಜನಿಕ ಚರ್ಚೆಗೆ ಕಾರಣವಾಗಿದ್ದವು. ಇದೀಗ ಹಳೆಯ ಗೃಹಪ್ರವೇಶದ ವಿಡಿಯೋ ಮತ್ತೆ ವೈರಲ್ ಆಗಿರುವುದರಿಂದ ಆ ಚರ್ಚೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



