Kannada NewsLatestNational

* ಭಾರಿ ಮಳೆ: 16 ಮಂದಿ ಸಾವು, 100ಕ್ಕೂ ಹೆಚ್ಚು ಮನೆಗಳಿಗೆ ಹಾನಿ*

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದಲ್ಲಿ ಕಳೆದ 48 ಗಂಟೆಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಹಲವು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ದಾಖಲಾಗಿದ್ದು, ಭಾನುವಾರವೂ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದ ಸರಾಸರಿ ಮಳೆ ವಾಡಿಕೆಗಿಂತ 19 ಪಟ್ಟು ಅಧಿಕವಾಗಿದೆ. ಭಾರಿ ಮಳೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದ್ದು, ನಾಲ್ಕು ಜಾನುವಾರುಗಳು ಮೃತಪಟ್ಟಿವೆ. ರಾಜಧಾನಿ ಲಖನೌನಲ್ಲಿ ಬೆಳಗಿನ ಜಾವದವರೆಗೆ 125.8 ಮಿ.ಮೀ ಮಳೆ ದಾಖಲಾಗಿದೆ.

ಫರುಖಾಬಾದ್ ಮತ್ತು ಕಾನ್ಪುರ ನಗರಗಳಲ್ಲಿ ವಾಡಿಕೆಗಿಂತ ಕ್ರಮವಾಗಿ 200 ಮತ್ತು 160 ಪಟ್ಟು ಹೆಚ್ಚು ಮಳೆಯಾಗಿದ್ದು, ಕನೌಜ್, ಕಾನ್ಪುರ ದೇಹಾತ್ ಹಾಗೂ ಹರ್ದೋಯ್ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಿದೆ.

ಮಳೆ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಜೀವಹಾನಿ, ಮನೆ ಹಾನಿ ಮತ್ತು ಜಾನುವಾರು ನಷ್ಟಕ್ಕೆ ಪರಿಹಾರ ನೀಡುವುದರ ಜೊತೆಗೆ, ಬೆಳೆ ಹಾನಿಯ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಭಾರಿ ಮಳೆ ಹಾಗೂ ಬಿರುಗಾಳಿಯಿಂದಾಗಿ ಕೊಯ್ಲಿಗೆ ಸಿದ್ಧವಾಗಿದ್ದ ಖಾರೀಫ್ ಬೆಳೆಗಳು ನೀರಿನಲ್ಲಿ ಮುಳುಗಿ ಹಾನಿಗೊಳಗಾಗಿವೆ. ಹೊಲಗಳಲ್ಲಿ ನೀರು ನಿಂತಿರುವುದರಿಂದ ಮುಂಬರುವ ರಬಿ ಹಂಗಾಮಿನ ಬಿತ್ತನೆ ವಿಳಂಬವಾಗುವ ಆತಂಕ ರೈತರಲ್ಲಿ ಮೂಡಿದೆ.

ಗಂಗಾ ಎಕ್ಸ್‌ಪ್ರೆಸ್‌ವೇ ಜಲಾವೃತ

ಧಾರಾಕಾರ ಮಳೆಯಿಂದಾಗಿ ಉನ್ನಾವೋದ ಬಶೀರತ್‌ಗಂಜ್ ಟೋಲ್ ಪ್ಲಾಜಾ ಬಳಿ ನಿರ್ಮಾಣ ಹಂತದಲ್ಲಿರುವ 594 ಕಿ.ಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇ ಜಲಾವೃತಗೊಂಡಿದೆ. 

ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ, ಹಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಉನ್ನಾವೋದಲ್ಲಿ ಶನಿವಾರ ಬೆಳಗಿನ ವೇಳೆಗೆ 65 ಮಿ.ಮೀ ಮಳೆ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button