
ಪ್ರಗತಿವಾಹಿನಿ ಸುದ್ದಿ: ಲೋಕೋಪಯೋಗಿ ಸಚಿವರೊಬ್ಬರು ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ದೆಹಲಿ ಲೋಕೋಪಯೋಗಿ ಇಲಾಖೆ ಸಚಿವ ಪರ್ವೇಶ್ ವರ್ಮಾ ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಶ್ಚಿಮ ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಾಮಗಾರಿ ಪರಿಶೀಲನೆ ವೇಳೆ ವ್ಯಕ್ತಿ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಈ ವೇಳೆ ಸಚಿವರು ಮೊದಲು ಮೊಬೈಲ್ ಅನ್ನು ಕೆಳಕ್ಕೆ ತಳ್ಳಿ ಆತನ ಕೆನ್ನೆಗೆ ಭಾರಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳದಲ್ಲಿ ಕೆಲಕಾಲ ಗದ್ದಲ ಉಂಟಾಗಿದ್ದು, ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಘಟನೆಯ ಬಳಿಕ ಪರ್ವೇಶ್ ವರ್ಮಾ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಆ ವ್ಯಕ್ತಿ ತನ್ನ ಕುಟುಂಬದ ಸದಸ್ಯರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದರಿಂದ ತಾವು ಪ್ರತಿಕ್ರಿಯಿಸಿದ್ದಾಗಿ ಅವರು ಹೇಳಿದ್ದಾರೆ.
ಈ ಘಟನೆ ವೇಳೆ ಸ್ಥಳದಲ್ಲಿದ್ದ ಎಎಪಿ ಶಾಸಕ ಜರ್ನೈಲ್ ಸಿಂಗ್ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸಿದ್ದಾರೆ. ರಸ್ತೆಯ ಮೇಲಿನ ಡಾಂಬರನ್ನು ಕೈಯಿಂದಲೇ ಕಿತ್ತು ತೋರಿಸಿ ಕಾಮಗಾರಿ ಕಳಪೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


