Film & EntertainmentHealthKannada NewsKarnataka News

*3 ಗಂಟೆಗಳ ಕಾಲ ಹೇಳಿಕೆ ದಾಖಲಿಸಿದ ಮಾಫಿ ಸಾಕ್ಷಿ ಪ್ರದೋಷ್*: *ನಾಳೆ ಮತ್ತೆ ವಿಚಾರಣೆ!*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಎ14 ಆರೋಪಿ ಪ್ರದೋಷ್ ಅವರ ಸಾಕ್ಷ್ಯ ವಿಚಾರಣೆಯನ್ನು ಬೆಂಗಳೂರಿನ 59ನೇ ಸಿಸಿಹೆಚ್‌ ನ್ಯಾಯಾಲಯ ಸೆಪ್ಟೆಂಬರ್ 29ಕ್ಕೆ ಮುಂದೂಡಿದೆ. ಇಂದು ನ್ಯಾಯಾಲಯದ ಮುಂದೆ ಹಾಜರಾದ ಪ್ರದೋಷ್ ಸತತ ಮೂರು ಗಂಟೆಗಳ ಕಾಲ ಮಹತ್ವದ ಹೇಳಿಕೆ ದಾಖಲಿಸಿದ್ದಾರೆ. ಹೇಳಿಕೆಯ ಸಂಪೂರ್ಣ ಪ್ರಕ್ರಿಯೆ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ವಿಚಾರಣೆ ನಾಳೆಗೆ ಮುಂದೂಡಲಾಗಿದೆ.

ಪ್ರದೋಷ್ ದಾಖಲಿಸಿದ ಸುದೀರ್ಘ ಹೇಳಿಕೆಯನ್ನು ಪ್ರಿಂಟ್‌ಔಟ್ ಪಡೆದು, ಸಹಿ ಪಡೆಯಬೇಕಿರುವುದರಿಂದ ವಿಚಾರಣೆ ಮುಂದುವರಿಸಲು ಸಮಯ ಅಗತ್ಯವಿದೆ ಎಂದು ಎಸ್‌ಪಿಪಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಮನವಿಯನ್ನು ಪರಿಗಣಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು. ಬಳಿಕ ಪೊಲೀಸರು ಪ್ರದೋಷ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.

ಇದರ ನಡುವೆ ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ಪ್ರಶ್ನಿಸಿ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜಾ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮನವಿ ಪುರಸ್ಕಾರವಾಗದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿದೆ ಎಂದು ಹಷ್ಮತ್ ಪಾಷಾ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಿಂದ ಆದೇಶ ಬಂದರೆ ಪ್ರಸ್ತುತ ನಡೆಯುತ್ತಿರುವ ಸಾಕ್ಷ್ಯ ವಿಚಾರಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹಷ್ಮತ್ ಪಾಷಾ ಹೇಳಿದ್ದಾರೆ. ಇಂದು ಸಾಕ್ಷ್ಯದ ಒಂದು ಭಾಗ ದಾಖಲಾಗಿದ್ದು, ಸೆಪ್ಟೆಂಬರ್ 29ರಂದು ಉಳಿದ ಪ್ರಕ್ರಿಯೆ ನಡೆಯಲಿದೆ. ಹೈಕೋರ್ಟ್ ಆದೇಶದಂತೆ ದರ್ಶನ್ ನ್ಯಾಯಾಲಯಕ್ಕೆ ಹಾಜರಿದ್ದು ಪ್ರದೋಷ್ ಅವರ ಹೇಳಿಕೆಯನ್ನು ಪ್ರಶ್ನಿಸುವ ಅವಕಾಶ ಹೊಂದಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

ಪ್ರದೋಷ್ ಮಾಫಿ ಸಾಕ್ಷಿಯಾಗಿರುವುದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಮುಂದುವರಿಯುತ್ತಿರುವ ಬೆನ್ನಲ್ಲೇ, ಸಾಕ್ಷ್ಯ ವಿಚಾರಣೆ ಹಾಗೂ ಸುಪ್ರೀಂ ಕೋರ್ಟ್‌ನ ಅರ್ಜಿ ಎರಡೂ ಪ್ರಕರಣದ ಮುಂದಿನ ಬೆಳವಣಿಗೆಯಲ್ಲಿ ಪ್ರಮುಖವಾಗಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button