Kannada NewsKarnataka NewsLatest

*ಕಂಬಳದ ನಂದಳಿಕೆ ಪಾಂಡು ಇನ್ನಿಲ್ಲ*: *201 ಪದಕಗಳ ಸರದಾರನಿಗೆ ಭಾವುಕ ವಿದಾಯ*

ಪ್ರಗತಿವಾಹಿನಿ ಸುದ್ದಿ: ತುಳುನಾಡಿನ ಕಂಬಳದ ಕರೆಯಲ್ಲಿ ಮಿಂಚಿನ ವೇಗದ ಓಟದ ಮೂಲಕ ಇತಿಹಾಸ ಬರೆದಿದ್ದ ನಂದಳಿಕೆ ಪಾಂಡು ಇನ್ನಿಲ್ಲ. 26ನೇ ವಯಸ್ಸಿನಲ್ಲಿ ಪಾಂಡು ಕೊನೆಯುಸಿರೆಳೆದಿದ್ದು, ಕಂಬಳ ಪ್ರಿಯರು ಹಾಗೂ ಕರಾವಳಿಯ ಜಾನಪದ ಕ್ರೀಡಾಲೋಕದಲ್ಲಿ ದುಃಖ ಆವರಿಸಿದೆ. ನಂದಳಿಕೆ ಶ್ರೀಕಾಂತ ಭಟ್ ಅವರ ಪ್ರೀತಿಯ ಕೋಣವಾಗಿದ್ದ ಪಾಂಡು ದೇಶ-ವಿದೇಶಗಳಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿತ್ತು.

ಕಂಬಳದಲ್ಲಿ ಸಾಮಾನ್ಯವಾಗಿ ಕೋಣಗಳು ಒಂದು ಬದಿಯಲ್ಲಿ ಓಡುವುದು ಸಾಮಾನ್ಯ. ಆದರೆ ಪಾಂಡು ಎಡ ಮತ್ತು ಬಲ ಎರಡೂ ಬದಿಗಳಲ್ಲಿ ಸಮತೋಲನದೊಂದಿಗೆ ಓಡುವ ಅಪರೂಪದ ಸಾಮರ್ಥ್ಯ ಹೊಂದಿತ್ತು. ‘ಕುಟ್ಟಿ’ಯೊಂದಿಗೆ ಪಾಂಡು ಕಟ್ಟಿದ ಜೋಡಿ ಕಂಬಳದ ಅಂಗಳದಲ್ಲಿ ಅಜೇಯ ಜೋಡಿಯಾಗಿ ಗುರುತಿಸಿಕೊಂಡಿತ್ತು. ‘ಪಾಂಡು-ಕುಟ್ಟಿ’ ಕಣಕ್ಕಿಳಿದರೆ ಗೆಲುವು ಖಚಿತ ಎಂಬ ಮಾತು ತುಳುನಾಡಿನಲ್ಲಿ ಮನೆಮಾತಾಗಿತ್ತು.

ಅದರ ಪರಿಣಾಮ ಪಾಂಡು ಕಂಬಳದ ಕೋಣವಷ್ಟೇ ಆಗದೆ ಜನಪ್ರಿಯ ಹೆಸರಾಗಿ ಬೆಳೆದಿತ್ತು. ಪ್ರತಿ ಕಂಬಳ ಋತುವಿನಲ್ಲೂ ಸಾಧನೆ ಮೆರೆದ ಪಾಂಡು ಬರೋಬ್ಬರಿ 201 ಪದಕಗಳನ್ನು ಗೆದ್ದಿತ್ತು. ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾರಂಭದಲ್ಲೂ ಹಾಲಿ ಮುಖ್ಯಮಂತ್ರಿ ಹಾಗೂ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪಾಂಡುವಿಗೆ ವಿಶೇಷ ಗೌರವ ಸಲ್ಲಿಸಲಾಗಿತ್ತು.

ಪಾಂಡು ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಂದಳಿಕೆಗೆ ಸಾವಿರಾರು ಅಭಿಮಾನಿಗಳು, ಕಂಬಳ ಆಯೋಜಕರು ಹಾಗೂ ಗ್ರಾಮಸ್ಥರು ಆಗಮಿಸಿ ಅಂತಿಮ ದರ್ಶನ ಪಡೆದರು. ಸಾಂಪ್ರದಾಯಿಕವಾಗಿ ಸ್ನಾನ ಮಾಡಿಸಿ, ವಸ್ತ್ರ ಹಾಗೂ ಹೂಮಾಲೆಗಳಿಂದ ಅಲಂಕರಿಸಿ ಕಹಳೆ ಊದಿ ಗೌರವ ಸಲ್ಲಿಸಲಾಯಿತು. ಪಾಂಡು ಗೆದ್ದ 201 ಪದಕಗಳ ಸಂಕೇತವಾಗಿ ದೇಹದ ಮೇಲೆ 201 ಹೂಗಳನ್ನು ಇರಿಸಿ ಭಾವುಕ ನಮನ ಸಲ್ಲಿಸಲಾಯಿತು.

ಅಂತ್ಯಕ್ರಿಯೆ ವೇಳೆ ಮಾಲೀಕ ಶ್ರೀಕಾಂತ ಭಟ್ ಹಾಗೂ ಕುಟುಂಬಸ್ಥರ ದುಃಖ ಮುಗಿಲುಮುಟ್ಟಿತ್ತು. ಪಾಂಡುವಿನ ದೇಹಕ್ಕೆ ಮಣ್ಣು ಹಾಕುತ್ತಾ ಕಣ್ಣೀರಿಟ್ಟ ಶ್ರೀಕಾಂತ ಭಟ್, “ಪಾಂಡು, ನೀನು ನನಗಾಗಿ ಅಪಾರ ಸಾಧನೆ ಮಾಡಿದ್ದೀಯಾ. ನಿನಗೆ ಋಣಿಯಾಗಿದ್ದೇನೆ. ಮುಂದಿನ ಜನ್ಮದಲ್ಲೂ ಕೋಣವಾಗಿ ಹುಟ್ಟುವುದಾದರೆ ನನ್ನದೇ ಕೊಟ್ಟಿಗೆಯಲ್ಲಿ ಹುಟ್ಟಿ ಬಾ” ಎಂದು ಭಾವುಕರಾದರು. ಈ ವಿದಾಯದ ಕ್ಷಣ ನೆರೆದಿದ್ದವರ ಕಣ್ಣಲ್ಲೂ ನೀರು ತರಿಸಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button