Kannada NewsKarnataka NewsLatest

*ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ವಾಪಸ್ ಬನ್ನೇರುಘಟ್ಟಕ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆ ಹಿಂಭಾಗದ ಅಂಚೆಪಾಳ್ಯದಲ್ಲಿ ನಾಗರಾಜ್ (60) ಎಂಬವರನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಯಶಸ್ವಿಯಾಗಿ ಬನ್ನೇರುಘಟ್ಟ ಅರಣ್ಯಕ್ಕೆ ಹಿಮ್ಮೆಟ್ಟಿಸಲಾಗಿದೆ. ಬಿಎಂ ಕಾವಲು ಮೀಸಲು ಅರಣ್ಯದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರಿ ನಡೆಸಿದ ಕಾರ್ಯಾಚರಣೆ ಮೂಲಕ ಎಲಿಫೆಂಟ್ ಕಾರಿಡಾರ್‌ ಕಡೆಗೆ ಕರೆದೊಯ್ದಿದ್ದಾರೆ.

ಕಾಡಾನೆಯ ಚಲನವಲನ ಪತ್ತೆಹಚ್ಚಲು ಅಧಿಕಾರಿಗಳು ಎರಡು ಥರ್ಮಲ್ ಡ್ರೋನ್‌ಗಳನ್ನು ಬಳಸಿದ್ದಾರೆ. ಬಿಎಂ ಕಾವಲು ಅರಣ್ಯದಲ್ಲಿ ಆನೆ ಅಡಗಿದ್ದ ಸ್ಥಳವನ್ನು ಗುರುತಿಸಿ, ಅದರ ಜಾಡು ಹಿಡಿದು ಕಾರ್ಯಾಚರಣೆ ನಡೆಸಲಾಗಿದೆ. ಡಿಸಿಎಫ್ ಚಕ್ರಪಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಆನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ 100ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು. ಬಿಎಂ ಕಾವಲು ಅರಣ್ಯದಿಂದ ಟಿಕೆ ಫಾರೆಸ್ಟ್‌ ಮೂಲಕ ಸಾಗುವ ಆನೆ ಪಥದತ್ತ ಕಾಡಾನೆಯನ್ನು ಕರೆದೊಯ್ಯಲಾಗಿದೆ. ಬಳಿಕ ಎಲಿಫೆಂಟ್ ಕಾರಿಡಾರ್ ಮೂಲಕ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ವಾಪಸ್ ಕಳುಹಿಸಲಾಗಿದೆ.

ಕಾರ್ಮಿಕನ ಸಾವಿನ ಬಳಿಕ ಆತಂಕಕ್ಕೆ ಕಾರಣವಾಗಿದ್ದ ಕಾಡಾನೆಯನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಹಿಮ್ಮೆಟ್ಟಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಾರ್ಯಾಚರಣೆಯ ವೇಳೆ ಥರ್ಮಲ್ ಡ್ರೋನ್‌ಗಳ ಮೂಲಕ ಆನೆಯ ಚಲನವಲನದ ಮೇಲೆ ನಿಗಾ ಇಡಲಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button