Belagavi NewsBelgaum NewsCrimeKannada NewsKarnataka News

*ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಲ್ಯೂಮಿನಿಯಂ ತಂತಿ ಕಳ್ಳರ ಬಂಧನ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿಯ ಬಸವೇಶ್ವರ ನಗರದಲ್ಲಿ ನಡೆದ ಅಲ್ಯೂಮಿನಿಯಂ ತಂತಿ ಕಳ್ಳತನ ಪ್ರಕರಣವನ್ನು ಚಿಕ್ಕೋಡಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಕಳ್ಳತನ ಮಾಡಲಾಗಿದ್ದ 200 ಕೆ.ಜಿ. ಅಲ್ಯೂಮಿನಿಯಂ ತಂತಿ ಸೇರಿದಂತೆ ಸುಮಾರು ₹1.75 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಗಸ್ಟ್ 1ರಿಂದ 2ರ ಅವಧಿಯಲ್ಲಿ ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಸವೇಶ್ವರ ನಗರದಲ್ಲಿ ಕೇಬಲ್‌ಗೆ ಸಂಬಂಧಿಸಿದ ಅಲ್ಯೂಮಿನಿಯಂ ತಂತಿಯನ್ನು ಕಳ್ಳತನ ಮಾಡಲಾಗಿತ್ತು. 

ಸುಮಾರು ₹70 ಸಾವಿರ ಮೌಲ್ಯದ 200 ಕೆ.ಜಿ. ತಂತಿ ಕಳ್ಳತನವಾಗಿರುವ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಖ್ಯೆ 276/2026ರ ಅಡಿಯಲ್ಲಿ ಬಿಎನ್‌ಎಸ್–2023ರ ಕಲಂ 303(2) ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. 

ತನಿಖೆ ಮುಂದುವರಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕಳ್ಳತನವಾಗಿದ್ದ ಅಲ್ಯೂಮಿನಿಯಂ ತಂತಿ, ಒಂದು ಸ್ಕೂಟರ್ ಹಾಗೂ ಒಂದು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ₹1.75 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಪ್ರಕರಣದಲ್ಲಿ ಸುಭಾನ ಮುಲ್ತಾನಿ ಹಾಗೂ ಅನ್ನಪ್ಪ ಕರಡಿ ಬಂಧಿತ ಆರೋಪಿಗಳಾಗಿದ್ದು, ಒಟ್ಟು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕೋಡಿ ಪೊಲೀಸ್ ಠಾಣೆಯ ಪಿಐ ಕೆ. ರಾಮರಾಜನ್, ಪಿಎಸ್‌ಐ ಎಸ್.ಪಿ. ಬೆಳಗಾವಿ ಹಾಗೂ ಸಿಬ್ಬಂದಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿದ್ದಾರೆ. ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button