Kannada NewsKarnataka NewsLatest

*ಮೊಬೈಲ್ ಟಾರ್ಚ್ ಬೆಳಕಲ್ಲೂ ಬರ ಅಧ್ಯಯನ*: *ರಾಯಚೂರಿನಲ್ಲಿ ಬೆಳೆ ಹಾನಿ ಪರಿಶೀಲಿಸಿದ ಕೇಂದ್ರ ತಂಡ*

ಪ್ರಗತಿವಾಹಿನಿ ಸುದ್ದಿ: ಬರ ಪರಿಸ್ಥಿತಿಯ ವಾಸ್ತವ ಚಿತ್ರ ತಿಳಿಯಲು ರಾಯಚೂರಿಗೆ ಆಗಮಿಸಿದ್ದ ಕೇಂದ್ರ ಬರ ಅಧ್ಯಯನ ತಂಡ ರಾತ್ರಿ ವೇಳೆಯೂ ಬೆಳೆ ಹಾನಿ ಪರಿಶೀಲನೆ ನಡೆಸಿದೆ. ಕತ್ತಲು ಆವರಿಸಿದ ಬಳಿಕ ಜಮೀನಿನಲ್ಲಿ ಮೊಬೈಲ್ ಟಾರ್ಚ್ ಬೆಳಕು ಬಳಸಿ ಬೆಳೆಗಳನ್ನು ವೀಕ್ಷಿಸಿ ಅಧಿಕಾರಿಗಳು ಹಾಗೂ ರೈತರಿಂದ ಮಾಹಿತಿ ಸಂಗ್ರಹಿಸಿದರು.

ಮಧ್ಯಾಹ್ನ ರಾಯಚೂರಿಗೆ ಆಗಮಿಸಿದ ಕೇಂದ್ರ ತಂಡ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿತು. ಸಂಜೆಯಾದರೂ ಅಧ್ಯಯನ ಮುಂದುವರಿದಿದ್ದು, ರಾತ್ರಿ ವೇಳೆಯೂ ತಂಡ ಜಮೀನುಗಳಿಗೆ ಭೇಟಿ ನೀಡಿತು.

ದೇವದುರ್ಗ, ಲಿಂಗಸೂಗೂರು ಹಾಗೂ ಮಸ್ಕಿ ತಾಲೂಕುಗಳಲ್ಲಿ ಬರ ಅಧ್ಯಯನ ನಡೆಸಲಾಯಿತು. ಮೆಣಸಿನಕಾಯಿ, ಹತ್ತಿ ಮತ್ತು ತೊಗರಿ ಬೆಳೆಗಳಿಗೆ ಉಂಟಾಗಿರುವ ಹಾನಿಯ ಕುರಿತು ತಂಡ ಮಾಹಿತಿ ಕಲೆಹಾಕಿತು.

ಮಸ್ಕಿ ತಾಲೂಕಿನ ಅಮೀನಗಡ ಗ್ರಾಮಕ್ಕೂ ತಂಡ ಭೇಟಿ ನೀಡಿತು. ಇಲ್ಲಿ ತೊಗರಿ ಬೆಳೆ ಪರಿಶೀಲಿಸಿದ ಅಧಿಕಾರಿಗಳು ಬೆಳೆ ಪರಿಸ್ಥಿತಿ ಹಾಗೂ ಹಾನಿಯ ಪ್ರಮಾಣದ ಕುರಿತು ರೈತರಿಂದ ನೇರವಾಗಿ ಮಾಹಿತಿ ಪಡೆದರು.

ಸಂಜೆಯಾಗುತ್ತಿದ್ದಂತೆ ಜಮೀನುಗಳಲ್ಲಿ ಕತ್ತಲು ಆವರಿಸಿದರೂ ಪರಿಶೀಲನೆ ನಿಲ್ಲಿಸಲಿಲ್ಲ. ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬೆಳೆ ವೀಕ್ಷಣೆ ನಡೆಸಿ ಅಗತ್ಯ ಮಾಹಿತಿ ದಾಖಲಿಸಿಕೊಳ್ಳಲಾಯಿತು. ಕೇಂದ್ರ ತಂಡದ ಈ ಬರ ಅಧ್ಯಯನದ ವರದಿ ಆಧರಿಸಿ ಮುಂದಿನ ಪರಿಹಾರ ಹಾಗೂ ನೆರವು ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button