Kannada NewsKarnataka NewsLatest

*ಕನ್ನಡದವರು ಕೆಲಸ ಬಿಟ್ಟು ಹೋಗಿ, ಇಲ್ಲ ಹಿಂದಿ ಕಲಿತು ಬನ್ನಿ*: *ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರ ಮೇಲೆ ದರ್ಪ?*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕನ್ನಡಿಗರಿಗೆ ಹಿಂದಿ ಕಲಿಯುವಂತೆ ಒತ್ತಾಯಿಸಿ, ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗುವಂತೆ ಹೇಳಿದ ಆರೋಪ ಕೇಳಿಬಂದಿದೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹುಸ್ಕೂರು ಬಳಿಯ ಕಂಪನಿಯೊಂದರಲ್ಲಿ ಈ ಘಟನೆ ನಡೆದಿದ್ದು, ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕನ್ನಡದಲ್ಲಿ ಮಾತನಾಡುತ್ತಿದ್ದ ನೌಕರರಿಗೆ ಹಿಂದಿ ಕಲಿತು ಬರುವಂತೆ ಸೂಚಿಸುತ್ತಿರುವುದು ಕಂಡುಬಂದಿದೆ.

“ಕನ್ನಡ ಮಾತನಾಡುವವರು ಕೆಲಸ ಬಿಟ್ಟು ಹೋಗಬಹುದು. ಇಲ್ಲಿ ಕೆಲಸ ಮಾಡಬೇಕಾದರೆ ಹಿಂದಿ ಕಲಿಯಬೇಕು” ಎಂಬ ರೀತಿಯಲ್ಲಿ ವ್ಯಕ್ತಿ ಮಾತನಾಡಿರುವುದು ವಿಡಿಯೋದಲ್ಲಿದೆ. ಇದಕ್ಕೆ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿ, “ಇದು ಕರ್ನಾಟಕ, ಹಿಂದಿ ಯಾಕೆ ಕಲಿಯಬೇಕು?” ಎಂದು ಪ್ರಶ್ನಿಸಿದ್ದಾರೆ.

“ಕರ್ನಾಟಕದಲ್ಲಿದ್ದರೇನು, ಇಲ್ಲಿ ಹಿಂದಿಯೇ ನಡೆಯುತ್ತದೆ” ಎಂಬ ರೀತಿಯಲ್ಲಿ ವ್ಯಕ್ತಿ ಮಾತನಾಡಿದ್ದು, ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ವಿಡಿಯೋ ವೈರಲ್ ಆದ ಬಳಿಕ ಕನ್ನಡಪರ ಸಂಘಟನೆಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಆಕ್ರೋಶ ವ್ಯಕ್ತವಾಗಿದೆ. ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಈ ನಡುವೆ, ಖಾಸಗಿ ಸಂಸ್ಥೆಗಳಲ್ಲಿ ಕೆಲಸದ ಸ್ಥಳದಲ್ಲಿ ಭಾಷಾ ಬಳಕೆಗೆ ಸಂಬಂಧಿಸಿದಂತೆ ಪರಸ್ಪರ ಗೌರವ ಮತ್ತು ವೃತ್ತಿಪರ ಸಂವಹನದ ಅಗತ್ಯದ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಭಾಷೆ ಹಾಗೂ ಸ್ಥಳೀಯ-ಹೊರಗಿನವರ ವಿಚಾರಕ್ಕೆ ಸಂಬಂಧಿಸಿದ ಹಲವು ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ. ಈ ಹಿನ್ನೆಲೆ ಹುಸ್ಕೂರು ಕಂಪನಿಯ ವಿಡಿಯೋ ಕೂಡ ವ್ಯಾಪಕ ಗಮನ ಸೆಳೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button