*ಫಾರ್ಮ್-7 ದುರುಪಯೋಗಪಡಿಸಿಕೊಳ್ಳುತ್ತಿದ್ದರೆ ನಾವೇನು ಅವರಿಗೆ ‘ಭಾರತ ರತ್ನ’ ನೀಡಬೇಕೇ? ಪ್ರಿಯಾಂಕ್ ಖರ್ಗೆ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ಎಸ್ಐಆರ್ ಪ್ರಕ್ರಿಯೆ ವಿವಾದಕ್ಕೆ ಸಂಬಂಧಿಸಿದಂತೆ ಫಾರ್ಮ್-7 ಅರ್ಜಿಗಳಿಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸುವುದನ್ನು ಹಾಗೂ ಪರಿಶೀಲನೆಯನ್ನು ನಿಲ್ಲಿಸುವಂತೆ ಕೋರಿ ರಾಜ್ಯ ಬಿಜೆಪಿಯ ಉನ್ನತ ಮಟ್ಟದ ನಿಯೋಗವು ಡಿಜಿ-ಐಜಿಪಿ ಎಂ.ಎ. ಸಲೀಂ ಅವರನ್ನು ಭೇಟಿ ಮಾಡಿರುವ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ಅವರು ಫಾರ್ಮ್-7 ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ, ನಾವೇನು ಅವರಿಗೆ ‘ಭಾರತ ರತ್ನ’ ನೀಡಬೇಕೇ?… ಎಂದು ಗರಂ ಆದರು.
ಈ ರೀತಿಯ ಬೃಹತ್ ಪ್ರಮಾಣದ ಮತ್ತು ಮೊದಲೇ ಮುದ್ರಿತವಾದ (pre-printed) ಫಾರ್ಮ್-7 ಅರ್ಜಿಗಳು ಕೇವಲ ಬಿಜೆಪಿಯಿಂದಲೇ ಏಕೆ ಬರುತ್ತಿವೆ?… ನೀವು ದೇಶದ ಕಾನೂನನ್ನು ಪಾಲಿಸದಿದ್ದರೆ, ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವುದನ್ನು ನಾವು ಖಚಿತಪಡಿಸುತ್ತೇವೆ ಎಂದರು.
ಇಂತಹ ಕೃತ್ಯಗಳನ್ನು ಎಸಗಿದರೂ ಸುಲಭವಾಗಿ ಪಾರಾಗಬಹುದು ಎಂದುಕೊಳ್ಳಲು ಇದು ಗುಜರಾತ್, ದೆಹಲಿ ಅಥವಾ ಉತ್ತರ ಪ್ರದೇಶವಲ್ಲ, ಇದು ಕರ್ನಾಟಕ. ಮತದಾರರ ಗುರುತಿನ ಚೀಟಿ ಸಂಖ್ಯೆಗಳು ಹೆಸರುಗಳು, ವಿಳಾಸಗಳು ಮತ್ತು ಲೋಪದೋಷಗಳ ವಿವರಗಳನ್ನು ಒಳಗೊಂಡಿರುವ 1,000 ಮೊದಲೇ ಮುದ್ರಿತ ಅರ್ಜಿಗಳು ಅವರಿಗೆ ಹೇಗೆ ಸಿಗುತ್ತಿವೆ? ಅವರು ಜೀವಂತವಾಗಿರುವವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸುತ್ತಿದ್ದಾರೆ. ಅಂದರೆ ಬಿಜೆಪಿಯವರು ಈಗ ಚುನಾವಣಾ ಆಯೋಗದ ಕೆಲಸವನ್ನು ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



