
ಪ್ರಗತಿವಾಹಿನಿ ಸುದ್ದಿ: ಮನ್‌ಮುಲ್ ಹಾಲಿನಪುಡಿ ಕಲಬೆರಕೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಮನ್‌ಮುಲ್‌ನಲ್ಲಿ ಉಂಟಾಗಿದ್ದ ಹಾಲಿನಪುಡಿ ದಾಸ್ತಾನು ಕೊರತೆಯನ್ನು ಸರಿದೂಗಿಸಲು ಕಲಬೆರಕೆ ಹಾಲಿನಪುಡಿ ತಂದು ಇಟ್ಟಿದ್ದ ಆರೋಪಿಗಳು, ಸಂಸ್ಥೆಯ ಹಾಲಿನಪುಡಿ ಬ್ಯಾಗ್‌ಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮನ್‌ಮುಲ್‌ನ ಹಾಲಿನಪುಡಿ ಸಾಗಣೆ ವಾಹನಗಳ ಮೂಲಕವೇ ಖಾಸಗಿ ವ್ಯಕ್ತಿಗಳಿಗೆ ಪುಡಿ ಮಾರಾಟ ಮಾಡಲಾಗುತ್ತಿತ್ತು. ಈ ಮಾರಾಟದಿಂದ ಬಂದ ಹಣವನ್ನು ಮನ್‌ಮುಲ್‌ನ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಪ್ರದೀಪ್ ಜಾಧವ್ ಹಾಗೂ ಇತರರು ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮನ್‌ಮುಲ್ ಮೇಲಧಿಕಾರಿಗಳ ಪರಿಶೀಲನೆ ವೇಳೆ ಹಾಲಿನಪುಡಿ ದಾಸ್ತಾನಿನಲ್ಲಿ ಭಾರೀ ಕೊರತೆ ಪತ್ತೆಯಾಗಿತ್ತು. ಆಡಿಟ್ ವೇಳೆ ಒಟ್ಟು 110.4 ಟನ್ ಹಾಲಿನಪುಡಿ ಕೊರತೆ ಕಂಡುಬಂದಿತ್ತು. ಈ ಕೊರತೆಯನ್ನು ಸರಿದೂಗಿಸಲು 54.9 ಟನ್ ಕಲಬೆರಕೆ ಹಾಲಿನಪುಡಿಯನ್ನು ಖರೀದಿಸಿ ದಾಸ್ತಾನಿನಲ್ಲಿ ಇರಿಸಲಾಗಿತ್ತು ಎಂಬ ಆರೋಪವಿದೆ. ಆದರೂ 55.5 ಟನ್ ಹಾಲಿನಪುಡಿ ಕೊರತೆಯಾಗಿದ್ದು, ಇದರಿಂದ ಮಂಡ್ಯ ಹಾಲು ಒಕ್ಕೂಟಕ್ಕೆ ಸುಮಾರು ₹2.88 ಕೋಟಿ ನಷ್ಟವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್‌ಮುಲ್‌ನ ಮಾಜಿ ಅಧಿಕಾರಿ ಪ್ರದೀಪ್ ಜಾಧವ್, ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಸಿಸ್ಟಮ್ ಆಪರೇಟರ್ ಶ್ರುತಿ, ಗೋಡೌನ್ ಮ್ಯಾನೇಜರ್ ರವಿ, ಉಸ್ತುವಾರಿ ಶ್ರೀನಿವಾಸ್, ಹಾಲಿನಪುಡಿ ಘಟಕದ ಮುಖ್ಯಾಧಿಕಾರಿ ಶ್ರೀನಿವಾಸಮೂರ್ತಿ ಹಾಗೂ ಶಿವಪ್ಪ ಅವರ ಆಪ್ತ ಸುರೇಶ್ ಸೇರಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ನಿದೀಶ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ತಲೆಮರೆಸಿಕೊಂಡಿರುವ ಉಪ ವ್ಯವಸ್ಥಾಪಕ ರಾಮಕೃಷ್ಣಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸದ್ಯ ಉಮ್ಮಡಹಳ್ಳಿ ಶಿವಪ್ಪರನ್ನು ಮದ್ದೂರು ಪೊಲೀಸರು ಐದು ದಿನಗಳ ಕಸ್ಟಡಿಗೆ ಪಡೆದಿದ್ದಾರೆ. ದಾಸ್ತಾನು, ಹಾಲಿನಪುಡಿ ಸಾಗಣೆ ಹಾಗೂ ಅಕ್ರಮ ಮಾರಾಟದ ಕುರಿತು ತನಿಖೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


