Belagavi NewsBelgaum NewsKarnataka NewsPolitics

*ಬೆಳಗಾವಿ ಗ್ರಾಮೀಣ ಕ್ಷೇತ್ರದ ಅತವಾಡ ಗ್ರಾಮದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಬಹಿರಂಗ ಸಭೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಅತವಾಡ ಗ್ರಾಮದಲ್ಲಿ ಸೋಮವಾರ ಸಂಜೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಸರ್ವ ಪಕ್ಷಗಳ ಮುಖಂಡರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಬಹಿರಂಗ ಸಭೆ ನಡೆಸಿ, ಗ್ರಾಮದ ಸಮಗ್ರ ಪ್ರಗತಿ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.


ಗ್ರಾಮದ ಅಭಿವೃದ್ಧಿಗಾಗಿ ಈಗಾಗಲೇ ಕೈಗೊಂಡಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಅವರು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಗ್ರಾಮಸ್ಥರೊಂದಿಗೆ ಕೂಲಂಕಷವಾಗಿ ಚರ್ಚಿಸಿದರು. ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್, ಸ್ವಚ್ಛತೆ, ಉದ್ಯೋಗಾವಕಾಶಗಳು ಹಾಗೂ ಮೂಲಸೌಕರ್ಯಗಳ ಸುಧಾರಣೆ ಸೇರಿದಂತೆ ಗ್ರಾಮದ ಅಗತ್ಯಗಳಿಗೆ ಸಂಬಂಧಿಸಿದ ಹಲವು ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದವು.


ಗ್ರಾಮಸ್ಥರು ತಮ್ಮ ಪ್ರದೇಶದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಸಲಹೆಗಳನ್ನು ಸಭೆಯಲ್ಲಿ ಮುಕ್ತವಾಗಿ ಹಂಚಿಕೊಂಡರು. ಗ್ರಾಮಸ್ಥರಿಂದ ಬಂದ ಪ್ರತಿಯೊಂದು ಸಲಹೆ ಮತ್ತು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಲಕ್ಷ್ಮೀ ಹೆಬ್ಬಾಳಕರ್ ಅವರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು. ಗ್ರಾಮದ ಸಮಗ್ರ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.


ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದ್ದು, ಗ್ರಾಮಸ್ಥರ ಅಗತ್ಯತೆಗಳು ಮತ್ತು ಅಭಿಪ್ರಾಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು. ಈಗಾಗಲೇ ಆರಂಭಗೊಂಡಿರುವ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸುವುದರ ಜೊತೆಗೆ, ಅಗತ್ಯವಿರುವ ಹೊಸ ಅಭಿವೃದ್ಧಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


ಸಭೆಯಲ್ಲಿ ಯುವರಾಜ ಕದಂ, ಬಾಳು ದೇಸೂರಕರ್, ಕಲ್ಲಪ್ಪ ಕಡೋಲ್ಕರ್, ಮಾರುತಿ ಬೆಳಗಾಂವ್ಕರ್, ಜಯವಂತ ಬಾಳೇಕುಂದ್ರಿ, ನಾರಾಯಣ ಮಾಸುಳೆ, ಮಾರುತಿ ಹೆಬ್ಬಾಳಕರ್, ವಸಂತ ಕಣಬರಕರ್, ನಾಗೋಜಿ ಕಣಬರಕರ್, ವಸಂತ ಪಾಟೀಲ, ಸೋಮನಾಥ್ ಪಾಟೀಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ತೋಲಾಟಿ, ಗಣಪತಿ ಯುವಕ ಮಂಡಳದ ಪದಾಧಿಕಾರಿಗಳು, ನರೇಗಾ ಕೆಲಸಗಾರರು, ಗ್ರಾಮದ ಪಂಚ ಕಮೀಟಿಯ ಸದಸ್ಯರು ಸೇರಿದಂತೆ ನೂರಾರು ಮಹಿಳೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button