Pragati ProfilePragativahini Special

*ವೈದ್ಯಕೀಯ ಸೇವೆಯಿಂದ ಸಮಾಜಮುಖಿ ಕಾರ್ಯದವರೆಗೆ… ಡಾ. ಸೋನಾಲಿ ಸರ್ನೋಬತ್ ಅವರ ಬಹುಮುಖ ಪಯಣ*

*ವೈದ್ಯಕೀಯ ಸೇವೆಯಿಂದ ಸಮಾಜಮುಖಿ ಕಾರ್ಯದವರೆಗೆ… ಡಾ. ಸೋನಾಲಿ ಸರ್ನೋಬತ್ ಅವರ ಬಹುಮುಖ ಪಯಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡು, ಉದ್ಯಮಶೀಲತೆ, ಮಹಿಳಾ ಸಬಲೀಕರಣ ಹಾಗೂ ಸಮಾಜಸೇವೆಯ ಮೂಲಕ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಬಹುಮುಖ ವ್ಯಕ್ತಿತ್ವ ಡಾ. ಸೋನಾಲಿ ಸರ್ನೋಬತ್.

ವೈದ್ಯಕೀಯ ವೃತ್ತಿಯ ಜೊತೆಗೆ ಸಮಾಜದ ದುರ್ಬಲರು, ಮಹಿಳೆಯರು, ಮಕ್ಕಳು ಹಾಗೂ ಅಗತ್ಯವಿರುವವರ ನೆರವಿಗೆ ಸದಾ ಸ್ಪಂದಿಸುವ ಕಾರ್ಯಚಟುವಟಿಕೆಗಳು ಅವರ ವ್ಯಕ್ತಿತ್ವದ ಮತ್ತೊಂದು ಪ್ರಮುಖ ಮುಖವಾಗಿದೆ. ಕಳೆದ 22 ವರ್ಷಗಳಿಂದ ಕನ್ಸಲ್ಟಂಟ್ ಹೋಮಿಯೋಪಥ್ ಆಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಅವರು, ವೈದ್ಯಕೀಯ ಜ್ಞಾನವನ್ನು ಸಮಾಜಮುಖಿ ಕಾರ್ಯಗಳೊಂದಿಗೆ ಬೆಸೆದುಕೊಂಡಿದ್ದಾರೆ.

*ವೈದ್ಯಕೀಯ ಕ್ಷೇತ್ರದಲ್ಲಿ ಅನುಭವ*

BHMS, MD, CGO, CFN, MSc (Psychology) ಹಾಗೂ PG (Hom-London) ಸೇರಿದಂತೆ ವಿವಿಧ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ಡಾ. ಸೋನಾಲಿ ಸರ್ನೋಬತ್ ಅವರು ಬೆಳಗಾವಿಯಲ್ಲಿ ಹಾಗೂ ಗೋವಾದಲ್ಲಿ ಕಳೆದ 26 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಕೇದಾರ್ ಕ್ಲಿನಿಕ್ ಹಾಗೂ ಡಾ. ಸರ್ನೋಬತ್ ಹೋಮಿಯೋಪಥಿಕ್ ಕ್ಲಿನಿಕ್ ಅಂಡ್ ರಿಸರ್ಚ್ ಸೆಂಟರ್ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ವೈದ್ಯಕೀಯ ಕ್ಷೇತ್ರದ ಅನುಭವವನ್ನು ಬರವಣಿಗೆಯಲ್ಲಿಯೂ ಹಂಚಿಕೊಂಡಿರುವ ಅವರು, ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅವರ ‘ಆರೋಗ್ಯ ಮಂತ್ರ’, ‘Smart City – Being Smart’ ಹಾಗೂ ‘Diet & Me’ ಕೃತಿಗಳು ಅವರ ಬರವಣಿಗೆಯ ಆಸಕ್ತಿಗೆ ಸಾಕ್ಷಿಯಾಗಿವೆ.

ಹಲವೆಡೆ ಆರೋಗ್ಯ ಶಿಬಿರಗಳನ್ನು ಸಂಘಟಿಸುವ ಮೂಲಕ ಬೆಳಗಾವಿ ಹಾಗೂ ಸುತ್ತಮುತ್ತಲಿನ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಆರೋಗ್ಯದ ಅರಿವು ಮೂಡಿಸುವಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. 

*ವೈದ್ಯಕೀಯದ ಜೊತೆಗೆ ಉದ್ಯಮಶೀಲತೆ*

ವೈದ್ಯಕೀಯ ವೃತ್ತಿಯ ಜತೆಗೆ ಉದ್ಯಮ ಕ್ಷೇತ್ರದಲ್ಲೂ ಡಾ. ಸೋನಾಲಿ ಸರ್ನೋಬತ್ ಸಕ್ರಿಯರಾಗಿದ್ದಾರೆ. Brainways Career Academy, Inspire Career Institute, Swayambhu Essentials Pvt. Ltd., Herbasynth Medicare, Homeosmart Production House ಹಾಗೂ Flowercure.com ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಅವರು ಉದ್ಯಮಶೀಲತೆಯ ಹೆಜ್ಜೆಗಳನ್ನು ಇಟ್ಟಿದ್ದಾರೆ. ಅಲ್ಲದೆ, Niyathi Co-Op Societyಯ ಸಂಸ್ಥಾಪಕಿ ಹಾಗೂ ಹಾಲಿ ಚೇರಮನ್ ಆಗಿದ್ದಾರೆ.

ಅವರ ಉದ್ಯಮ ಚಟುವಟಿಕೆಗಳ ಪ್ರಮುಖ ಅಂಶವೆಂದರೆ ಅವಕಾಶವಂಚಿತ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನ. ಅವರ ಎರಡು ಉತ್ಪಾದನಾ ಘಟಕಗಳಲ್ಲಿ ಸುಮಾರು 50 ಮಹಿಳೆಯರು ಉದ್ಯೋಗ ನಿರ್ವಹಿಸುತ್ತಿದ್ದಾರೆ.

*‘ನಿಯತಿ ಫೌಂಡೇಶನ್’ ಮೂಲಕ ಸಮಾಜಸೇವೆ*

ಡಾ. ಸೋನಾಲಿ ಅವರ ಸಮಾಜಮುಖಿ ಕಾರ್ಯಗಳಿಗೆ ಪ್ರಮುಖ ವೇದಿಕೆಯಾಗಿ ನಿಯತಿ ಫೌಂಡೇಶನ್ ಕಾರ್ಯನಿರ್ವಹಿಸುತ್ತಿದೆ. ಮಕ್ಕಳು, ಮಹಿಳೆಯರು ಹಾಗೂ ದುರ್ಬಲ ವರ್ಗದವರ ಜೀವನದಲ್ಲಿ ಬದಲಾವಣೆ ತರಲು ಫೌಂಡೇಶನ್ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.

‘Mission No Suicide’ ಕಾರ್ಯಕ್ರಮದ ಮೂಲಕ ಖಿನ್ನತೆ ಹಾಗೂ ಆತ್ಮಹತ್ಯಾ ಪ್ರವೃತ್ತಿಯಿಂದ ಬಳಲುತ್ತಿರುವವರಿಗೆ ಸಮಾಲೋಚನೆ ನೀಡಿ, ಅವರನ್ನು ನಕಾರಾತ್ಮಕತೆಯಿಂದ ಸಕಾರಾತ್ಮಕತೆಯತ್ತ ಕರೆದೊಯ್ಯುವ ಪ್ರಯತ್ನ ನಡೆಸಲಾಗಿದೆ. ಇದೇ ರೀತಿ ‘Home Minister’ ಕಾರ್ಯಕ್ರಮದ ಮೂಲಕ ಗೃಹಿಣಿಯರಿಗೆ ಆರೋಗ್ಯ ಹಾಗೂ ಕಾನೂನು ಹಕ್ಕುಗಳ ಕುರಿತು ಅರಿವು ಮೂಡಿಸಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

*ಪಕ್ಷ ನಿಷ್ಠೆ, ಸಂಘಟನಾ ಚತುರೆ*

ಡಾ.ಸೋನಾಲಿ ಸರ್ನೋಬತ್ ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಮತ್ತು ನಿಷ್ಠೆಯ ಕಾರ್ಯಕರ್ತೆ. ಪಕ್ಷದ ಯಾವುದೇ ಕಾರ್ಯಕ್ರಮ, ಹೋರಾಟ, ಪ್ರತಿಭಟನೆಗಳಿದ್ದರೂ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವವರು. ಜೊತೆಗೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆ, ವಿಧಾನ ಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ನಿರಂತರ ಪ್ರಚಾರ ಮಾಡಿದ್ದಾರೆ. ಪಕ್ಷದ ಎಲ್ಲ ಪ್ರಮುಖರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದು, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಬರಲಿರುವ ಚುನಾವಣೆಯಲ್ಲಿ ಪಕ್ಷ ಯಾವುದೇ ಕ್ಷೇತ್ರದಿಂದ ಕಣಕ್ಕಿಳಿಸಲು ಮುಂದಾದರೂ ಅದಕ್ಕೆ ಬೇಕಾದಷ್ಟು ಸಂಘಟನಾ ಸಿದ್ಧತೆ ಮಾಡಿಕೊಂಡಿದ್ದಾರೆ. 

*ಕೊರೋನಾ ಸಂದರ್ಭದಲ್ಲೂ ನೆರವಿನ ಹಸ್ತ*

 ಕೋವಿಡ್ ಅವಧಿಯಲ್ಲಿ ನಿಯತಿ ಫೌಂಡೇಶನ್ ಮೂಲಕ ಅಗತ್ಯವಿರುವವರಿಗೆ ನೆರವು ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹೋಮಿಯೋಪಥಿಕ್ ಔಷಧ ವಿತರಣೆ, ಸಾವಿರಾರು ಕುಟುಂಬಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ, ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ಪ್ರದೇಶಗಳಿಗೆ PPE ಕಿಟ್‌ಗಳ ನೆರವು, ಅಗತ್ಯವಿರುವವರಿಗೆ ಆಹಾರ ಧಾನ್ಯಗಳ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ತೊಂದರೆ ಎದುರಿಸುತ್ತಿದ್ದ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್‌ಗಳನ್ನು ಒದಗಿಸುವುದು, ಉದ್ಯೋಗ ಕಳೆದುಕೊಂಡ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದು ಹಾಗೂ ಅಗತ್ಯವಿರುವ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸುವ ಕಾರ್ಯಗಳೂ ನಡೆದಿವೆ.

*ಖಾನಾಪುರದ ಅಭಿವೃದ್ಧಿಯ ಕುರಿತು ವಿಶೇಷ ದೃಷ್ಟಿಕೋನ*

ಖಾನಾಪುರ ತಾಲ್ಲೂಕಿನ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಸಮಸ್ಯೆಗಳತ್ತಲೂ ಡಾ. ಸೋನಾಲಿ ಸರ್ನೋಬತ್ ಗಮನಹರಿಸಿದ್ದಾರೆ. ದೂರದ ಗ್ರಾಮಗಳಿಗೆ ಪಡಿತರ ತಲುಪಿಸುವುದು, ರಸ್ತೆ–ಸೇತುವೆ ಸಮಸ್ಯೆಗಳ ಕುರಿತು ಸಂಬಂಧಿಸಿದ ಇಲಾಖೆಗಳೊಂದಿಗೆ ನಿರಂತರವಾಗಿ ಅನುಸರಣೆ ಮಾಡುವುದು, ರೇಷನ್ ಕಾರ್ಡ್, ಆಧಾರ್, ಶ್ರಮ ಕಾರ್ಡ್, ವಿಧವಾ ಪಿಂಚಣಿ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳಿಗಾಗಿ ಸಹಾಯ ಕೇಂದ್ರ ಆರಂಭಿಸುವುದು, ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಮುಂತಾದ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಖಾನಾಪುರದ ಭವಿಷ್ಯದ ಅಭಿವೃದ್ಧಿಗೆ ಪ್ರವಾಸೋದ್ಯಮ, ಸಾವಯವ ಕೃಷಿ, ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ, ಕೌಶಲ್ಯಾಭಿವೃದ್ಧಿ, ಆಹಾರ ಸಂಸ್ಕರಣಾ ಘಟಕಗಳು, ಸಕ್ಕರೆ–ಎಥನಾಲ್ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳ ಅವಕಾಶಗಳನ್ನು ಅವರು ಗುರುತಿಸಿದ್ದಾರೆ.

*ಮಹಿಳಾ ಸಬಲೀಕರಣಕ್ಕೆ ಆದ್ಯತೆ*

ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂಬುದು ಅವರ ಸಮಾಜಮುಖಿ ಚಟುವಟಿಕೆಗಳ ಪ್ರಮುಖ ಆಶಯಗಳಲ್ಲಿ ಒಂದಾಗಿದೆ. ಮಹಿಳೆಯರ ಆರೋಗ್ಯ, ಹಕ್ಕುಗಳು, ಕೌಶಲ್ಯಾಭಿವೃದ್ಧಿ ಮತ್ತು ಆರ್ಥಿಕ ಸ್ವಾವಲಂಬನೆಯ ಕುರಿತು ವಿವಿಧ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

ಗ್ರಾಮೀಣ ಭಾಗದ ಮಹಿಳೆಯರೊಂದಿಗೆ ನೇರ ಸಂಪರ್ಕ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಉಚಿತ ತಪಾಸಣಾ ಶಿಬಿರಗಳು ಹಾಗೂ ಮಹಿಳಾ ಸಮಾವೇಶಗಳ ಮೂಲಕ ಅವರೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸುವ ಕಾರ್ಯವೂ ನಡೆದಿದೆ.

*ಪ್ರಾಣಿಗಳ ಕಲ್ಯಾಣದಲ್ಲೂ ಸೇವೆ*

ಕರ್ನಾಟಕ ಅನಿಮಲ್ ವೆಲ್ಫೇರ್ ಬೋರ್ಡ್ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಸಾಕುಪ್ರಾಣಿಗಳ ಅಂಗಡಿಗಳು ಹಾಗೂ ಬ್ರೀಡರ್‌ಗಳ ನೋಂದಣಿ, ಪಶು ಆಸ್ಪತ್ರೆಗಳು ಮತ್ತು ಖಾಸಗಿ ಪಶು ಚಿಕಿತ್ಸಾಲಯಗಳ ಸಮೀಕ್ಷೆ, ಗೋಶಾಲೆಗಳು ಹಾಗೂ ಬೀದಿ ಪ್ರಾಣಿಗಳಿಗೆ ಕೋವಿಡ್ ಅವಧಿಯಲ್ಲಿ ಆಹಾರ ಮತ್ತು ನೀರಿನ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಗಳಲ್ಲಿ ಭಾಗವಹಿಸಿದ್ದಾರೆ.

*ಬಹುಮುಖ ಚಟುವಟಿಕೆಗಳ ಮೂಲಕ ವಿಭಿನ್ನ ಗುರುತು*

ವೈದ್ಯೆ, ಉದ್ಯಮಿ, ಲೇಖಕಿ, ಸಮಾಜಸೇವಕಿ ಹಾಗೂ ವಿವಿಧ ಸಾರ್ವಜನಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ಸೋನಾಲಿ ಸರ್ನೋಬತ್ ಅವರ ಪಯಣವು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ.

“ಬೆಳೆಯುವ ಮತ್ತು ಶ್ರೇಷ್ಠತೆಯನ್ನು ಸಾಧಿಸುವ ಸಂಸ್ಕೃತಿಯಲ್ಲಿ ಅರಳಿ, ಸಾರ್ವಜನಿಕ ಸೇವೆ ನೀಡುವುದು” ಎಂಬ ಅವರ ಧ್ಯೇಯವಾಕ್ಯವೇ ಅವರ ಬಹುಮುಖ ಚಟುವಟಿಕೆಗಳಿಗೆ ದಿಕ್ಕು ನೀಡುತ್ತದೆ.

ವೈದ್ಯಕೀಯ ಸೇವೆಯ ಮೂಲಕ ಆರೋಗ್ಯ, ಉದ್ಯಮದ ಮೂಲಕ ಉದ್ಯೋಗ, ಸಮಾಜಸೇವೆಯ ಮೂಲಕ ನೆರವು ಹಾಗೂ ಮಹಿಳಾ ಸಬಲೀಕರಣದ ಮೂಲಕ ಸ್ವಾವಲಂಬನೆಯತ್ತ ಹೆಜ್ಜೆ ಇಡುತ್ತಿರುವ ಡಾ. ಸೋನಾಲಿ ಸರ್ನೋಬತ್ ಅವರ ಪಯಣವು ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮದೇ ಆದ ಸಾಮಾಜಿಕ ಗುರುತನ್ನು ರೂಪಿಸಿಕೊಂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button