*ಲೋಕಾಯುಕ್ತ ಹೆಸರಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್*: *ಆರ್‌ಟಿಐ ಕಾರ್ಯಕರ್ತ ಬಂಧನ*

ಪ್ರಗತಿವಾಹಿನಿ ಸುದ್ದಿ: ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಆರ್‌ಟಿಐ ಕಾರ್ಯಕರ್ತನೊಬ್ಬನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಮೂಲದ ಮುರಳಿ (45) ಬಂಧಿತ ಆರೋಪಿ. ಲೋಕಾಯುಕ್ತ ಅಧಿಕಾರಿಗಳ ಲೆಟರ್‌ಹೆಡ್‌ಗಳನ್ನು ನಕಲಿ ಮಾಡಿ, ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ದೂರು ದಾಖಲಾಗಿದೆ ಎಂಬಂತೆ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅರಣ್ಯಾಧಿಕಾರಿ ಎಂಬಂತೆ ನಕಲಿ ಗುರುತಿನ ಚೀಟಿಯನ್ನೂ ಹೊಂದಿದ್ದ ಎನ್ನಲಾಗಿದೆ.
ಲೋಕಾಯುಕ್ತ ದೂರುಗಳಿಗೆ ಬಳಸುವ ನೈಜ ದೂರು ನಮೂನೆಗಳು ಹಾಗೂ ಅಫಿಡವಿಟ್ ಮಾದರಿಗಳನ್ನು ಮುರಳಿ ದುರ್ಬಳಕೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ದಾಖಲಾಗಿದ್ದ ದೂರುಗಳಲ್ಲಿನ ಹೆಸರು ಹಾಗೂ ಇತರ ವಿವರಗಳನ್ನು ಬದಲಿಸಿ, ಹೊಸದಾಗಿ ದೂರು ದಾಖಲಾದಂತೆ ನಕಲಿ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ ಎನ್ನಲಾಗಿದೆ.
ನಂತರ ಈ ದಾಖಲೆಗಳನ್ನು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ವಿಳಾಸಕ್ಕೆ ಕಳುಹಿಸುತ್ತಿದ್ದ. ಕೆಲ ದಿನಗಳ ಬಳಿಕ ಅಧಿಕಾರಿಗಳನ್ನು ಸಂಪರ್ಕಿಸಿ, ತಮ್ಮ ವಿರುದ್ಧ ದಾಖಲಾಗಿದೆ ಎಂದು ಬಿಂಬಿಸಿದ ದೂರುಗಳನ್ನು ಇತ್ಯರ್ಥಪಡಿಸುವ ಅಥವಾ ಹಿಂಪಡೆಯುವ ಭರವಸೆ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕಾಗಿ ₹3 ಸಾವಿರದಿಂದ ₹50 ಸಾವಿರದವರೆಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ. ಈ ರೀತಿಯಲ್ಲಿ ಹಲವು ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದಾನೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಯೊಬ್ಬರಿಗೆ ಇದೇ ರೀತಿಯ ನಕಲಿ ದೂರು ತಲುಪಿದ ಬಳಿಕ ಪ್ರಕರಣ ಬಯಲಿಗೆ ಬಂದಿದೆ. ಅನುಮಾನಗೊಂಡ ಅಧಿಕಾರಿ ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸಿ ದೂರುದ ವಿವರಗಳನ್ನು ಪರಿಶೀಲಿಸಿದಾಗ, ಅಂತಹ ಯಾವುದೇ ದೂರು ದಾಖಲಾಗಿಲ್ಲ ಎಂಬುದು ತಿಳಿದುಬಂದಿದೆ.
ಈ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಮುರಳಿಯನ್ನು ಬಂಧಿಸಿದ್ದಾರೆ. ಹಣ ವಸೂಲಿಗೆ ಬಳಸಿದ್ದ ಬ್ಯಾಂಕ್ ಖಾತೆಗಳ ವಹಿವಾಟಿನ ಬಗ್ಗೆಯೂ ತನಿಖೆ ಮುಂದುವರಿದಿದೆ.
ತನಿಖೆಯಲ್ಲಿ ಕೆಲವು ಬ್ಯಾಂಕ್ ಖಾತೆಗಳು ಮೂರನೇ ವ್ಯಕ್ತಿಗಳ ಹೆಸರಿನಲ್ಲಿ ನೋಂದಣಿಯಾಗಿರುವುದು ಪತ್ತೆಯಾಗಿದೆ. ಖಾತೆದಾರರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿ, ಮುರಳಿಯೊಂದಿಗಿನ ಸಂಪರ್ಕ ಹಾಗೂ ಹಣದ ವಹಿವಾಟಿನಲ್ಲಿ ಪಾತ್ರವೇನು ಎಂಬುದರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವಿಧಾನದಲ್ಲಿ ಮತ್ತಷ್ಟು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡಲಾಗಿದೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




