Kannada NewsKarnataka NewsLatestPolitics

*ಸ್ಟಿಂಗ್ ಆಪರೇಷನ್ ಹಿಂದೆ ಡಿಕೆಶಿ ಕೈವಾಡದ ಆರೋಪ*: *ಸಿಬಿಐ ತನಿಖೆಗೆ ಎಚ್‌ಡಿಕೆ ಆಗ್ರಹ!*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಮತ್ತಷ್ಟು ತೀವ್ರಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದು, ನಿವೃತ್ತ ಪೊಲೀಸ್ ಅಧಿಕಾರಿಗಳ ತಂಡವನ್ನು ಬಳಸಿಕೊಂಡು ಸಂಪುಟ ಸಹೋದ್ಯೋಗಿಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ದೂರಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ವಿಚಾರದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಸದಾಶಿವನಗರದಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ಆರಂಭದಲ್ಲಿ ಮಾಧ್ಯಮಗಳ ಕುರಿತು ಮಾಹಿತಿ ಸಂಗ್ರಹಿಸಲು ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಭಾವಿಸಿದ್ದೆ. ಆದರೆ, ಹೊಸ ತಂತ್ರಜ್ಞಾನ ಬಳಸಿ ಸಂಪುಟದ ಸಹೋದ್ಯೋಗಿಗಳು ಏನು ಚರ್ಚೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಬಂದಿದೆ ಎಂದು ಹೇಳಿದರು.

ಈ ಕುರಿತು ಪೊಲೀಸ್ ಇಲಾಖೆಯವರೇ ಮಾತನಾಡಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, ರಾಜ್ಯದಲ್ಲಿ ನಡೆಯುತ್ತಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಆರೋಪಗಳ ಕುರಿತು ಸತ್ಯಾಸತ್ಯತೆ ತಿಳಿಯಲು ಸಿಬಿಐ ತನಿಖೆ ಅಗತ್ಯವಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿಯೂ ತಿಳಿಸಿದರು.

ಹಿಂದಿನ ಸ್ಟಿಂಗ್ ಆಪರೇಷನ್ ಪ್ರಕರಣಗಳನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಶಾಸಕ ರಮೇಶ್ ಜಾರಕಿಹೊಳಿ ಪ್ರಕರಣ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಸದನದಲ್ಲಿ ಉಲ್ಲೇಖಿಸಿದ್ದ 48 ಮಂದಿಯ ವಿಚಾರವನ್ನು ನೆನಪಿಸಿದರು. ಈ ಬೆಳವಣಿಗೆಗಳಿಂದ ರಾಜ್ಯದ ರಾಜಕೀಯ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ ಎಂದು ಟೀಕಿಸಿದರು.

“ಶಿವಕುಮಾರ್ ಅವರೇ, ನೀವು ಸ್ಟಿಂಗ್ ಆಪರೇಷನ್‌ಗೆ ನೀರೆರೆದು ಬೆಳೆಸಿದ ಸಸಿ ಈಗ ಹೆಮ್ಮರವಾಗಿದೆ. ಅದರ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ” ಎಂಬರ್ಥದಲ್ಲಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಆದರೆ, ಸ್ಟಿಂಗ್ ಆಪರೇಷನ್ ಕುರಿತು ತಾವು ಮಾಡಿರುವ ಆರೋಪಗಳ ಬಗ್ಗೆ ತನಿಖೆಯ ಮೂಲಕವೇ ಸತ್ಯಾಂಶ ಹೊರಬರಬೇಕಿದೆ ಎಂಬುದು ಅವರ ಒತ್ತಾಯವಾಗಿದೆ.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಈ ವಿಚಾರದಲ್ಲಿ ಅವರು ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು. ತಮ್ಮ ಕುಟುಂಬ ಎದುರಿಸಿರುವ ಪರಿಸ್ಥಿತಿ ಮತ್ತು ಸಿದ್ದರಾಮಯ್ಯ ಅವರ ನೋವು ತಮಗೆ ಅರ್ಥವಾಗುತ್ತದೆ ಎಂದು ಹೇಳಿದ ಹೆಚ್‌ಡಿಕೆ, ಸ್ಟಿಂಗ್ ಆಪರೇಷನ್‌ನಂತಹ ಪ್ರವೃತ್ತಿಗಳು ನಿಲ್ಲಬೇಕಾದರೆ ಮುಖ್ಯಮಂತ್ರಿ ಮೌನವಾಗಿರದೆ ಸ್ಪಷ್ಟ ನಿಲುವು ತಾಳಬೇಕು ಎಂದು ಒತ್ತಾಯಿಸಿದರು.

“ನೀವು ಕೂಡ ತನಿಖೆಯಾಗಬೇಕು ಎಂದು ಹೇಳಿದ್ದೀರಿ. ಹಾಗಾದರೆ ಹೆದರಬೇಕಾದ ಅಗತ್ಯವೇನು? ಈ ಕೆಟ್ಟ ಪ್ರವೃತ್ತಿಯನ್ನು ನಿಲ್ಲಿಸಲು ಹೋರಾಟ ಮಾಡಬೇಕು” ಎಂದು ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ ಎಂಬ ಆರೋಪ, ಅದರ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆ ಮತ್ತು ಸಿಬಿಐ ತನಿಖೆಗೆ ಆಗ್ರಹಿಸಿರುವ ವಿಚಾರ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button