Kannada NewsLatestWorld

*ಹೌತಿ ಕ್ಷಿಪಣಿ ದಾಳಿಗೆ ಸೌದಿ ತತ್ತರ*: *ಪ್ರಧಾನಿ  ಮೊಹಮ್ಮದ್ ಬಿನ್ ಸಲ್ಮಾನ್‌ಗೆ ಭದ್ರತೆ ಹೆಚ್ಚಳ!*

ಪ್ರಗತಿವಾಹಿನಿ ಸುದ್ದಿ: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ವಿಮಾನ ನಿಲ್ದಾಣದ ಮೇಲೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ದಾಳಿಗಳಲ್ಲಿ 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಸೌದಿ ಕ್ರೌನ್ ಪ್ರಿನ್ಸ್ ಹಾಗೂ ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.

ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಸಂಭಾವ್ಯ ದಾಳಿಗಳ ಬೆದರಿಕೆ ಹಿನ್ನೆಲೆಯಲ್ಲಿ 41 ವರ್ಷದ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೂಗತ ಬಂಕರ್‌ಗಳ ಸೌಲಭ್ಯವಿರುವ ಬಿಗಿ ಭದ್ರತೆಯ ಅರಮನೆಗಳ ನಡುವೆ ಸ್ಥಳಾಂತರಿಸಲಾಗುತ್ತಿದೆ. ಇತ್ತೀಚೆಗೆ ರಾಷ್ಟ್ರೀಯ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ರಕ್ತದಾನ ಮಾಡಿದ್ದ ಅವರು, ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಆಯ್ದ ಭದ್ರತಾ ಸಿಬ್ಬಂದಿಯ ಕಣ್ಗಾವಲಿನಲ್ಲಿ ಅವರ ಸುರಕ್ಷತೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕಳೆದ ಕೆಲವು ದಿನಗಳಲ್ಲಿ ಹಲವು ಬಾರಿ ದಾಳಿಗಳು ನಡೆದಿವೆ. ವಾರಾಂತ್ಯದಲ್ಲಿ ನಡೆದ ದಾಳಿಯಲ್ಲಿ 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ನಂತರವೂ ವಿಮಾನ ನಿಲ್ದಾಣದ ಮೇಲೆ ಮತ್ತೊಂದು ದಾಳಿ ನಡೆದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನಗಳ ಹಾರಾಟ ರದ್ದಾಗಿದ್ದು, ಅಂತರರಾಷ್ಟ್ರೀಯ ಪ್ರಯಾಣಕ್ಕೂ ಅಡ್ಡಿಯಾಗಿದೆ.

ಹೌತಿಗಳ ಕ್ಷಿಪಣಿ ದಾಳಿಗಳನ್ನು ತಡೆಯಲು ಬಳಸುವ ಇಂಟರ್‌ಸೆಪ್ಟರ್ ಕ್ಷಿಪಣಿಗಳ ಸಂಗ್ರಹ ಕಡಿಮೆಯಾಗುತ್ತಿರುವ ಆತಂಕವೂ ಸೌದಿ ಅರೇಬಿಯಾವನ್ನು ಕಾಡುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸೌದಿ ವಾಯುಪಡೆಯು ಪ್ರಮುಖ ವಾಯು ರಕ್ಷಣಾ ವ್ಯವಸ್ಥೆಗಳನ್ನು ರಾಜಮನೆತನದ ಅರಮನೆಗಳು ಮತ್ತು ಪ್ರಮುಖ ಇಂಧನ ಘಟಕಗಳ ರಕ್ಷಣೆಗೆ ಮರುನಿಯೋಜಿಸಿದೆ. ಸೌದಿ ಇಂಧನ ಸಚಿವ ಪ್ರಿನ್ಸ್ ಅಬ್ದುಲಜೀಜ್ ಬಿನ್ ಸಲ್ಮಾನ್, ದಾಳಿಗಳಿಗೆ ಕಠಿಣ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಹೌತಿಗಳ ವಿರುದ್ಧದ ಸೌದಿ ಸೇನಾ ಕಾರ್ಯಾಚರಣೆಗೆ ಅಮೆರಿಕ ನೇರವಾಗಿ ಕೈಜೋಡಿಸುವ ಸಾಧ್ಯತೆಯ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಸೌದಿ ವಿದೇಶಾಂಗ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಕೇವಲ ಸೇನಾ ಕ್ರಮದಿಂದ ಸಂಘರ್ಷಕ್ಕೆ ಪರಿಹಾರ ಸಿಗುವುದಿಲ್ಲ ಎಂದು ತಿಳಿಸಿರುವ ಅವರು, ಹೌತಿಗಳು ಮತ್ತು ಸೌದಿ ಅರೇಬಿಯಾ ನಡುವೆ ಶಾಂತಿ ಮಾತುಕತೆ ನಡೆಸಲು ಇರಾನ್ ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ.

2022ರಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟಿದ್ದ ಕದನ ವಿರಾಮವು 2026ರ ಜುಲೈನಲ್ಲಿ ಕುಸಿದ ಬಳಿಕ ಸಂಘರ್ಷ ಮತ್ತೆ ತೀವ್ರಗೊಂಡಿದೆ. ಸನಾ ವಿಮಾನ ನಿಲ್ದಾಣದ ಮೇಲೆ ಸೌದಿ ದಾಳಿ ನಡೆಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೌತಿಗಳು ಹೊಸ ಸುತ್ತಿನ ದಾಳಿಗಳನ್ನು ಆರಂಭಿಸಿದ್ದಾರೆ. ಇದೀಗ ಸೌದಿ ವಿಮಾನ ನಿಲ್ದಾಣಗಳು ಮತ್ತು ಅರಾಮ್ಕೊದಂತಹ ಪ್ರಮುಖ ತೈಲ ಮೂಲಸೌಕರ್ಯಗಳು ಗುರಿಯಾಗುತ್ತಿರುವುದರಿಂದ, ಹಾರ್ಮುಜ್ ಜಲಸಂಧಿ ಹಾಗೂ ಕೆಂಪು ಸಮುದ್ರದ ವ್ಯಾಪಾರ ಮಾರ್ಗಗಳ ಮೇಲೂ ಆತಂಕ ಹೆಚ್ಚಾಗಿದೆ. ಸಂಘರ್ಷ ಮುಂದುವರಿದರೆ ಜಾಗತಿಕ ಇಂಧನ ಪೂರೈಕೆ ಮತ್ತು ಕಚ್ಚಾ ತೈಲ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button