
ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಕೋಲಾಹಲವೆಬ್ಬಿಸಿದೆ. ಈ ಸಂಬಂಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕೆಲ ಸುಳಿವು ಜೊತೆ ಸ್ಟಿಂಗ್ ಆಪರೇಷನ್ ಸೂತ್ರಧಾರಿಯ ಫೋಟೋ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಸ್ಟಿಂಗ್ ಮಾಡಿದವರ ಹೆಸರು ಸಹ ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನು ಈ ಸ್ಟಿಂಗ್ ಆಪರೇಷನ್ ಬಗ್ಗೆ ಸಿದ್ದರಾಮಯ್ಯ ಅಕ್ಟೋಬರ್ 6ರಂದು ದೂರು ನೀಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ, ತನಿಖೆಗೆ ಚುರುಕುಗೊಳಿಸಿದೆ. ಹಾಗಾದರೆ ಸಿದ್ದರಾಮಯ್ಯ ನೀಡಿರುವದೂರಿನಲ್ಲಿ ಏನಿದೆ? ದೂರಿನಲ್ಲಿರುವ ಅಂಶಗಳು ಬಹಿರಂಗವಾಗಿವೆ.
ಸಿದ್ದರಾಮಯ್ಯ ಮೇಲೆ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಈಗಾಗಲೇ ಪೊಲಿಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ತನಿಖೆ ಚುರುಕುಗೊಂಡಿದೆ.
ಈ ನಡುವೆ ಸಿದ್ದರಾಮಯ್ಯ ನೀಡಿರುವ ದೂರಿನಲ್ಲಿರುವ ಅಂಶಗಳು ಬಹಿರಂಗವಾಗಿವೆ. ಸೆಪ್ಟಂಬರ್ 27ರಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಸಂಬಂಧ ಮಾಜಿ ಸಿದ್ದರಾಮಯ್ಯ ಅವರು ದೂರು ದಾಖಲಿಸಿದ್ದು, ದೂರಿನಲ್ಲಿ ಅಪರಿಚಿತ ವ್ಯಕ್ತಿಗಳು ಸುಳ್ಳು ಹಾಗೂ ದುರುದ್ದೇಶಪೂರಿತ ಮಾಹಿತಿಯೊಂದಿಗೆ ನಕಲಿ ಗುರುತು ಬಳಸಿ, ಗುಪ್ತವಾಗಿ ಚಿತ್ರೀಕರಿಸಿದ ವಿಡಿಯೋವನ್ನು ಹಂಚಿಕೊಂಡಿದ್ದು, ಯೂಟ್ಯೂಬ್ ವಾಹಿನಿಯಲ್ಲಿ ತಮ್ಮ ಬಗ್ಗೆ ಗಂಭೀರ ಅವಹೇಳನಕಾರಿ ಹಾಗೂ ಸುಳ್ಳು ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಕಲಿ ಗುರುತನ್ನು ಬಳಸಿ ಗುಪ್ತವಾಗಿ ಚಿತ್ರೀಕರಿಸಿದ ವೀಡಿಯೊ ಸೃಷ್ಟಿಸಿ. ಆ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ. ದೂರುದಾರರ ಸಾರ್ವಜನಿಕ ಗೌರವ, ಜೀವನಕ್ಕೆ ಹಾನಿ ಉಂಟುಮಾಡುವ ದುರುದ್ದೇಶದಿಂದ ವಿಡಿಯೋ ಸೃಷ್ಟಿಸಿದವರ ಮತ್ತು ಪ್ರಸಾರ ಮಾಡಿದ ವ್ಯಕ್ತಿಗಳ ಬಗ್ಗೆ ತನಿಖೆ ಮಾಡಬೇಕು. ಆರೋಪಿಗಳನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯನವರ ದೂರಿನ ಮೇರೆಗೆ ಅಕ್ಟೋಬರ್ 6ರಂದು IT ಕಾಯ್ದೆಯ ಸೆಕ್ಷನ್ 66(C) ಮತ್ತು BNS ಕಾಯ್ದೆಯ ಸೆಕ್ಷನ್ 61, 3(5),308(6),336(4),340(2)ರಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ತನಿಖೆ ಮುಂದುವರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



