*ಯುವತಿಯ ವಿಡಿಯೋ ವೈರಲ್: ಆಕೆಯನ್ನು ಕೊಂದು ಅಪಘಾತದ ನಾಟಕವಾಡಿದ ತಂದೆ, ಸಹೋದರ*

ಪ್ರಗತಿವಾಹಿನಿ ಸುದ್ದಿ: ಯುವಕನೊಬ್ಬನ ಜೊತೆಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ 22 ವರ್ಷದ ಯುವತಿಯನ್ನು ಆಕೆಯ ತಂದೆ ಹಾಗೂ ಸಹೋದರ ಸೇರಿ ಹತ್ಯೆ ಮಾಡಿ, ಘಟನೆಯನ್ನು ರಸ್ತೆ ಅಪಘಾತವೆಂದು ಬಿಂಬಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಅಪಘಾತವೆಂದು ಭಾವಿಸಲಾಗಿದ್ದ ಪ್ರಕರಣ, ಪೊಲೀಸರ ತನಿಖೆಯಿಂದ ಕೊಲೆ ಸಂಚಿನ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ.
ಗುಜರಾತ್ನ ಅಹಮದಾಬಾದ್ನ ಸೋಫಿಯಾ ಹತ್ಯೆಯಾದ ಯುವತಿ. ಆಕೆ ಆಸ್ಪತ್ರೆಯೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು ಒಂದು ತಿಂಗಳ ಹಿಂದೆ ನಡೆದ ಈ ಘಟನೆ ಆರಂಭದಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣವೆಂದು ದಾಖಲಾಗಿತ್ತು. ಆದರೆ ಪೊಲೀಸರ ತನಿಖೆ ಮುಂದುವರಿದಂತೆ ಇದು ಅಪಘಾತವಲ್ಲ, ಪೂರ್ವಯೋಜಿತ ಕೊಲೆ ಎಂಬ ಅನುಮಾನ ಬಲಗೊಂಡಿದ್ದು, ಹತ್ಯೆಯ ಹಿಂದಿನ ಸಂಚು ಬಯಲಾಗಿದೆ.
ಪೊಲೀಸರ ತನಿಖೆಯ ಪ್ರಕಾರ, ಆಗಸ್ಟ್ 12ರ ರಾತ್ರಿ ಸೋಫಿಯಾ ತನ್ನ ತಂದೆ ಮೊಹಮ್ಮದ್ ಫಾರೂಕ್ ಹಾಗೂ 38 ವರ್ಷದ ಸಹೋದರ ಮೊಹಮ್ಮದ್ ಹಬೀಲ್ ಜೊತೆ ಬೈಕ್ನಲ್ಲಿ ತೆರಳಿದ್ದರು. ಗೇಲ್ಜಿಪುರ ಗ್ರಾಮದ ಸಮೀಪದ ನಿರ್ಜನ ರಸ್ತೆಗೆ ಬೈಕ್ ಕೊಂಡೊಯ್ದ ಹಬೀಲ್, ಅಲ್ಲಿ ಸೋಫಿಯಾ ತಲೆಗೆ ಸುತ್ತಿಗೆಯಿಂದ ಮೂರು ಬಾರಿ ಹೊಡೆದಿದ್ದಾನೆ ಎನ್ನಲಾಗಿದೆ. ಬಳಿಕ ತಂದೆ ಮತ್ತು ಮಗ ಸೇರಿ ಆಕೆಯ ದೇಹವನ್ನು ಮುಖ್ಯ ರಸ್ತೆಯ ಸಮೀಪಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಹತ್ಯೆಯನ್ನು ಮುಚ್ಚಿಹಾಕಲು ಬೈಕ್ಗೂ ಹಾನಿ ಮಾಡಿ, ವೇಗವಾಗಿ ಬಂದ ಅಪರಿಚಿತ ವಾಹನ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸೋಫಿಯಾ ಗಾಯಗೊಂಡಿದ್ದಾಳೆ ಎಂಬಂತೆ ಅಪಘಾತದ ದೃಶ್ಯ ಸೃಷ್ಟಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಬಳಿಕ ಹಬೀಲ್ ಪೊಲೀಸರನ್ನು ಸಂಪರ್ಕಿಸಿ, ಗೇಲ್ಜಿಪುರ ಜಂಕ್ಷನ್ ಬಳಿ ವೇಗವಾಗಿ ಬಂದ ವಾಹನ ತಮ್ಮ ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾನೆ.
ಅಪಘಾತದಲ್ಲಿ ಸೋಫಿಯಾಗೆ ತಲೆಗೆ ಗಂಭೀರ ಗಾಯವಾಗಿದ್ದು, ತನಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸೋಫಿಯಾಳನ್ನು ತಕ್ಷಣ ಸೋಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಆಕೆ ಮೃತಪಟ್ಟಿದ್ದಳು.
ಪ್ರಕರಣದ ತನಿಖೆ ವೇಳೆ ಕುಟುಂಬದ ಸದಸ್ಯರು ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ ಸೋಫಿಯಾ ಯುವಕನೊಬ್ಬನ ಜೊತೆಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಎನ್ನಲಾಗಿದ್ದು, ಇದೇ ಘಟನೆ ಹತ್ಯೆಗೆ ಕಾರಣವಾಗಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆದಿದೆ.
ಆರಂಭದಲ್ಲಿ ಅಪಘಾತವೆಂದು ಭಾವಿಸಲಾಗಿದ್ದ ಪ್ರಕರಣ, ಪೊಲೀಸರ ತನಿಖೆಯಿಂದ ಕೊಲೆ ಸಂಚಿನ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



