Kannada NewsKarnataka NewsLatestPolitics

*ಮಂಗಳೂರು ದಸರಾಕ್ಕೆ ಸಿಎಂ ಚಾಲನೆ*: *ಕರಾವಳಿಯಿಲ್ಲದೆ ಕರ್ನಾಟಕ ಪೂರ್ಣವಾಗದು ಎಂದ ಡಿಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಮೈಸೂರಿನ ದಸರಾ ರಾಜವೈಭವದ ಪ್ರತೀಕವಾದರೆ, ಮಂಗಳೂರಿನ ಕುದ್ರೋಳಿ ದಸರಾ ಲಕ್ಷಾಂತರ ಜನರ ಶ್ರದ್ಧೆ ಮತ್ತು ಭಕ್ತಿಯ ಸಂಕೇತ. ಅಲೆಯಿಲ್ಲದೆ ಸಮುದ್ರವಿಲ್ಲ, ಕರಾವಳಿಯಿಲ್ಲದೆ ಕರ್ನಾಟಕವೂ ಪೂರ್ಣವಾಗಲು ಸಾಧ್ಯವಿಲ್ಲ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮಂಗಳೂರಿನ ಐತಿಹಾಸಿಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುವಾರ ರಾತ್ರಿ ಜ್ಯೋತಿ ಬೆಳಗಿಸುವ ಮೂಲಕ ‘ಮಂಗಳೂರು ದಸರಾ–2026’ ಮಹೋತ್ಸವಕ್ಕೆ ಚಾಲನೆ ನೀಡಿದರು.

ದಕ್ಷಿಣ ಕನ್ನಡ ಪ್ರವಾಸದ ಅಂಗವಾಗಿ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿಗೆ ದೇವಸ್ಥಾನದ ಆಡಳಿತ ಮಂಡಳಿ ಪೂರ್ಣಕುಂಭ ಸ್ವಾಗತ ನೀಡಿತು. ಶ್ರೀ ಗೋಕರ್ಣನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಾರದಾ ಮಾತೆ, ನವದುರ್ಗೆಯರು ಮತ್ತು ಮಹಾಗಣಪತಿ ಮೂರ್ತಿಗಳ ದರ್ಶನ ಪಡೆದು ಪುಷ್ಪಾರ್ಚನೆ ಮಾಡಿದರು. ಬಳಿಕ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ಸಚಿವ ಯು.ಟಿ. ಖಾದರ್ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.

ಮಂಗಳೂರು ದಸರಾ ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ಸಂಸ್ಕೃತಿ, ಪರಂಪರೆ, ಒಗ್ಗಟ್ಟು ಮತ್ತು ಆರ್ಥಿಕ ಚಟುವಟಿಕೆಗಳ ಸಂಕೇತವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಜಾತಿ, ಧರ್ಮ ಮತ್ತು ಪಕ್ಷಭೇದ ಮರೆತು ಜನರು ಒಂದಾಗಿ ಸೇರುವ ಮಾನವೀಯತೆಯ ಮಹಾಸಂಗಮ ಕುದ್ರೋಳಿ ಕ್ಷೇತ್ರದಲ್ಲಿ ನಡೆಯುತ್ತದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಯ ಬಗ್ಗೆಯೂ ಮುಖ್ಯಮಂತ್ರಿ ಪ್ರಸ್ತಾಪಿಸಿದರು. ಇದು ಈ ಭಾಗದ ಜನರ ಭಾವನಾತ್ಮಕ ವಿಚಾರವಾಗಿದ್ದು, ತುಳುನಾಡಿನ ಸಂಸ್ಕೃತಿ ಮತ್ತು ಗೌರವಕ್ಕೆ ಸಂಬಂಧಿಸಿದೆ. ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಸಹಕಾರದ ಬಗ್ಗೆಯೂ ಭರವಸೆ ನೀಡಿದರು. ಮಂಗಳೂರು ದಸರಾಕ್ಕೆ ಶಾಶ್ವತ ಅನುದಾನ ನೀಡುವುದು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಜಮೀನು ಒದಗಿಸುವ ಬೇಡಿಕೆಗಳ ಕುರಿತು ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಬಳಿಕ ಬಿ. ಜನಾರ್ದನ ಪೂಜಾರಿ ಜೊತೆಗಿನ ಹಳೆಯ ನೆನಪುಗಳನ್ನು ಹಂಚಿಕೊಂಡ ಡಿ.ಕೆ. ಶಿವಕುಮಾರ್ ಭಾವುಕರಾದರು. 1985ರ ಚುನಾವಣೆಯಲ್ಲಿ ಸೋತು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಕನಕಪುರಕ್ಕೆ ಭೇಟಿ ನೀಡಿ ಸಾಲಮೇಳದ ಮೂಲಕ ಸಾವಿರಾರು ಬಡವರಿಗೆ ನೆರವು ನೀಡಿದ್ದರು. ಆ ನೆರವು ತಮ್ಮ ರಾಜಕೀಯ ಬದುಕಿಗೆ ಹೊಸ ಚೈತನ್ಯ ನೀಡಿತು ಎಂದು ಸ್ಮರಿಸಿದರು. ಸುಮಾರು 25 ವರ್ಷಗಳ ಬಳಿಕ ಮತ್ತೆ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು.

“ಅಧಿಕಾರ ಇರುವಾಗ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿ ಬಡವರ ಕಣ್ಣೀರು ಒರೆಸಬೇಕು. ಕೇವಲ ರಾಜಕಾರಣ ಮಾಡುವುದಲ್ಲ, ಜನರ ಬದುಕಿನ ಸುಧಾರಣೆಗೆ ಶ್ರಮಿಸುವುದೇ ನನ್ನ ಧ್ಯೇಯ” ಎಂದು ಮುಖ್ಯಮಂತ್ರಿ ಹೇಳಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ವತಿಯಿಂದ ಶಾಲು ಮತ್ತು ಶಾರದಾ ಮಾತೆಯ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಸರ್ಕಾರಕ್ಕೆ ಮೂರು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿತು. ನೂತನ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು 15 ಎಕರೆ ಜಮೀನು ಮಂಜೂರು ಮಾಡಬೇಕು, 36 ವರ್ಷಗಳಿಂದ ನಡೆಯುತ್ತಿರುವ ಮಂಗಳೂರು ದಸರಾಕ್ಕೆ ರಾಜ್ಯ ಬಜೆಟ್‌ನಲ್ಲಿ ಶಾಶ್ವತ ಅನುದಾನ ಮೀಸಲಿಡಬೇಕು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸಲು ಅಧಿಕೃತ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button