*NCBಯಿಂದ ಆಪರೇಷನ್ ಕ್ರಿಸ್ಟಲ್ ಹಂಟ್ ಕಾರ್ಯಾಚರಣೆ*: *ಓರ್ವ ವಿದೇಶಿ ಪ್ರಜೆ ಸೇರಿ ಇಬ್ಬರು ಅರೆಸ್ಟ್*: *ಏನಿದು ಪ್ರಕರಣ?*

ಪ್ರಗತಿವಾಹಿನಿ ಸುದ್ದಿ: ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್ಸಿಬಿ) ವ್ಯವಸ್ಥಿತ ರಹಸ್ಯ ಸಂಶ್ಲೇಷಿತ ಡ್ರಗ್ಸ್ ತಯಾರಿಕಾ ಜಾಲವನ್ನು ಭೇದಿಸಿದೆ. ಪ್ರಕರಣ ಸಂಬಂಧ ಓರ್ವ ವಿದೇಶಿ ಪ್ರಜೆ ಸೇರಿ ಇಬ್ಬರನ್ನು ಬಂಧಿಸಿದೆ.
ಬಾಡಿಗೆ ಮನೆಯೊಂದರಲ್ಲಿ ನಡೆಯುತ್ತಿದ್ದ ಎರಡು ಅಕ್ರಮ ಪ್ರಯೋಗಾಲಯಗಳ ಮೇಲೆ ದಿಢೀರ್ ದಾಳಿ ನಡೆಸಿದ ಎನ್ ಸಿಬಿ ಅಧಿಕಾರಿಗಳು, ಅಪಾರ ಪ್ರಮಾಣದ ಆಂಫೆಟಮೈನ್ ಮತ್ತು ಕಚ್ಚಾ ರಾಸಾಯನಿಕಗಳನ್ನು ವಶಪಡಿಸಿಕೊಂಡು ಓರ್ವ ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದಲ್ಲಿ ಜಹಾನಾಬಾದ್ ಕಡಲ್ಪುರ ಗ್ರಾಮದ ಮನೆ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ‘ಆಪರೇಷನ್ ಕ್ರಿಸ್ಟಲ್ ಹಂಟ್’ ಎಂಬ ಹೆಸರಿನಡಿ ನಡೆಸಲಾದ ಈ ಗುಪ್ತಚರ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕವಸ್ತು ತಯಾರಿಕಾ ಸರಕುಗಳು ಪತ್ತೆಯಾಗಿವೆ.
ದಾಳಿಯ ವೇಳೆ 4.26 ಕೆಜಿ ಘನ ರೂಪದ ಡ್ರಗ್ಸ್, 157.7 ಕೆಜಿ ಅರೆ-ಸಿದ್ಧ ಸ್ಥಿತಿಯ ಔಷಧಗಳು ಹಾಗೂ 217.78 ಕೆಜಿ ದ್ರವ ರೂಪದ ರಾಸಾಯನಿಕ ಮಿಶ್ರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಶ್ಲೇಷಿತ ಡ್ರಗ್ಸ್ ತಯಾರಿಸಲು ಬಳಸುವ ನಿರ್ಣಾಯಕ ರಾಸಾಯನಿಕವಾದ 10 ಕೆಜಿ ಸ್ಯೂಡೋಎಫೆಡ್ರಿನ್ ಪತ್ತೆಯಾಗಿದೆ. ಈ ಒಟ್ಟು ಕಚ್ಚಾವಸ್ತುಗಳಿಂದ ಮಾರುಕಟ್ಟೆಯಲ್ಲಿ ಗರಿಷ್ಠ ಬೇಡಿಕೆಯಿರುವ ಸುಮಾರು 56 ಕೆಜಿಯಷ್ಟು ಶುದ್ಧ ಸ್ಫಟಿಕದ ಆಂಫೆಟಮೈನ್ ತಯಾರಿಸಲು ಸಂಚು ರೂಪಿಸಲಾಗಿತ್ತು.
ಹೈಡ್ರೋಕ್ಲೋರಿಕ್ ಆಮ್ಲ, ಅಸಿಟೋನ್, ಟೊಲುಯೀನ್, ಸಲ್ಫ್ಯೂರಿಕ್ ಆಮ್ಲ, ಪೊಟ್ಯಾಸಿಯಮ್ ಪರ್ಮಾಂಗನೇಟ್ ರಾಸಾಯನಿಕಗಳ ಜೊತೆಗೆ ಗಾಜಿನ ರಿಯಾಕ್ಷನ್ ವೆಸೆಲ್ಗಳು, ಬೃಹತ್ ಹೀಟಿಂಗ್ ಯಂತ್ರಗಳು ಮತ್ತು ಡ್ರಮ್ಗಳನ್ನು ಜಪ್ತಿ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



