CrimeKannada NewsKarnataka NewsLatest

*ರಸ್ತೆ ಕಾಮಗಾರಿ ವೇಳೆ ಭೀಕರ ಸ್ಫೋಟ*: *ಐವರು ದುರ್ಮರಣ, ಎರಡು ವಾಹನಗಳು ಸಂಪೂರ್ಣ ನಾಶ!*

ಪ್ರಗತಿವಾಹಿನಿ ಸುದ್ದಿ: ರಸ್ತೆ ಕಾಮಗಾರಿ ವೇಳೆ ಸ್ಫೋಟಕ ಸಾಧನ ಸಿಡಿದು ಐವರು ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆ ಘಾಟ್ ರಸ್ತೆ ವಿಸ್ತರಣೆಗಾಗಿ ಬಂಡೆಗಳನ್ನು ಸ್ಫೋಟಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಎರಡು ವಾಹನಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ ಅನಂತಗಿರಿ ಮಂಡಲದ ಪಿನಕೋಟ ಗ್ರಾಮದಲ್ಲಿ ಘಟನೆ ನಡೆದಿದೆ. ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಜಿಲೆಟಿನ್ ಕಡ್ಡಿಗಳನ್ನು ಒಳಗೊಂಡ ವಿಶೇಷ ಸಾಧನ ಬಳಸಿ ಬಂಡೆಗಳನ್ನು ಸ್ಫೋಟಿಸಲಾಗುತ್ತಿತ್ತು. ಈ ವೇಳೆ ಸ್ಫೋಟಕ ಸಾಧನದಲ್ಲಿ ತಾಂತ್ರಿಕ ದೋಷ ಉಂಟಾಗಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ವಾಹನದ ಚಾಲಕ, ಮೂವರು ಕಾರ್ಮಿಕರು ಹಾಗೂ ವಾಹನದಲ್ಲಿದ್ದ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ವಿಶಾಖಪಟ್ಟಣಂನ ಶಿಕ್ಷಕಿ ಸುನೀತಾ, ದೇವರಪಲ್ಲಿಯ ಕಾರ್ಮಿಕ ಮಣಿ, ಚಿದಿಕಾಡದ ಕಾರ್ಮಿಕ ನಾರಾಯಣರಾವ್ ಹಾಗೂ ಕಡಪದ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಮೃತಪಟ್ಟ ಮತ್ತೊಬ್ಬರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಘಟನೆ ತಿಳಿದ ತಕ್ಷಣ ಸ್ಥಳೀಯ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಫೋಟದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಇತ್ತ ದುರಂತಕ್ಕೆ ಆಂಧ್ರಪ್ರದೇಶದ ಗೃಹ ಸಚಿವೆ ವಂಗಲಪುಡಿ ಅನಿತಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲೂರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಘಟನೆಯ ವಿವರಗಳನ್ನು ಪಡೆದುಕೊಂಡಿದ್ದಾರೆ. ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರ ನೆರವು ನೀಡಲಿದೆ ಎಂದು ಸಚಿವೆ ಭರವಸೆ ನೀಡಿದ್ದಾರೆ. ರಸ್ತೆ ಕಾಮಗಾರಿಯ ವೇಳೆ ಸಂಭವಿಸಿದ ಈ ಭೀಕರ ಸ್ಫೋಟ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button