CrimeFilm & EntertainmentKannada NewsKarnataka NewsLatest

*ನಟ ಧನ್ವೀರ್ ಗೌಡ ವಿರುದ್ಧ ಮತ್ತೊಂದು ದೂರು*: *ಬಸವೇಶ್ವರ ನಗರ ಠಾಣೆಯಲ್ಲಿ ಎನ್‌ಸಿಆರ್ ದಾಖಲು!*

ಪ್ರಗತಿವಾಹಿನಿ ಸುದ್ದಿ: ನಟ ಧನ್ವೀರ್ ಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಈಗ ಧನ್ವೀರ್ ವಿರುದ್ಧ ಬೋಜರಾಜ್ ಎಂಬುವರು ದೂರು ನೀಡಿದ್ದಾರೆ. ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.

ಬೋಜರಾಜ್ ನೀಡಿರುವ ದೂರಿನ ಪ್ರಕಾರ, ದರ್ಶನ್ ಪಿಎ ನಾಗರಾಜ್ ಅಕ್ಟೋಬರ್ 21ರಂದು ಕರೆ ಮಾಡಿ ಧನ್ವೀರ್ ಮನೆ ಬಳಿ ಬರುವಂತೆ ತಿಳಿಸಿದ್ದರು. ಅದರಂತೆ ತಾವು ತೆರಳಿ ನಾಗರಾಜ್ ಅವರನ್ನು ಕರೆದುಕೊಂಡು ಹೋಗಿದ್ದಾಗಿ ಹೇಳಿದ್ದಾರೆ. ಬಳಿಕ ಧನ್ವೀರ್ ಫೋನ್ ಮಾಡಿ ಬೆದರಿಕೆ ಹಾಕಿದ್ದು, ತಮ್ಮ ಲೊಕೇಶನ್ ಕಳುಹಿಸುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿದ್ದಾರೆ.

ಇಷ್ಟೇ ಅಲ್ಲದೆ, ಧನ್ವೀರ್ ವಾಟ್ಸಾಪ್ ಮೂಲಕ ಪದೇಪದೆ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಬೋಜರಾಜ್ ದೂರಿನಲ್ಲಿ ತಿಳಿಸಿದ್ದಾರೆ. ತಮಗೆ ಬಂದಿರುವ ಸಂದೇಶಗಳನ್ನು ಪೊಲೀಸರಿಗೆ ನೀಡಲು ಸಿದ್ಧವಿದ್ದು, ಧನ್ವೀರ್ ಮನೆ ಬಳಿ ತಾವು ತೆರಳಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ ಎಂದು ಹೇಳಿದ್ದಾರೆ. ಈ ದೃಶ್ಯಗಳನ್ನು ಅಳಿಸುವ ಸಾಧ್ಯತೆ ಇರುವುದರಿಂದ ಕೂಡಲೇ ಸಿಸಿಟಿವಿ ದಾಖಲೆಗಳನ್ನು ಪಡೆದು ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ಧನ್ವೀರ್ ತಂದೆ ತಿಮ್ಮೇಗೌಡ ನೀಡಿರುವ ಪ್ರತಿದೂರಿನಲ್ಲಿಯೂ ಬೋಜರಾಜ್ ಹೆಸರು ಉಲ್ಲೇಖವಾಗಿದೆ. ಅಕ್ಟೋಬರ್ 21ರಂದು ವಿಜಯಲಕ್ಷ್ಮಿ ಮತ್ತು ದರ್ಶನ್ ಪಿಎ ನಾಗರಾಜ್ ಧನ್ವೀರ್ ಮನೆಗೆ ತೆರಳಿದ್ದ ಸಂದರ್ಭದಲ್ಲಿ ನಾಗರಾಜ್, ಲೋಕೇಶ್ ಎಂಬುವರಿಗೆ ಕರೆ ಮಾಡಿ ಇಬ್ಬರನ್ನು ಸ್ಥಳಕ್ಕೆ ಕರೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆ ಇಬ್ಬರಲ್ಲಿ ಬೋಜರಾಜ್ ಕೂಡ ಒಬ್ಬರು ಎಂದು ಉಲ್ಲೇಖಿಸಲಾಗಿದೆ.

ಇದಕ್ಕೂ ಮೊದಲು ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್, ಧನ್ವೀರ್ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದರು. ಕರೆ ಮತ್ತು ಸಂದೇಶಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಿರುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಬೋಜರಾಜ್ ಕೂಡ ದೂರು ನೀಡಿದ್ದಾರೆ.

ಇತ್ತ ಧನ್ವೀರ್ ತಂದೆ ತಿಮ್ಮೇಗೌಡ, ವಿಜಯಲಕ್ಷ್ಮಿ, ನಾಗರಾಜ್ ಸೇರಿದಂತೆ ಇತರರ ವಿರುದ್ಧ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ. ಹೀಗಾಗಿ ಎರಡೂ ಕಡೆಯಿಂದ ದೂರುಗಳು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಧನ್ವೀರ್ ಅವರನ್ನು ವಿಚಾರಣೆಗೆ ಕರೆಸುವ ಸಾಧ್ಯತೆಯೂ ಇದೆ.

ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ಮನಸ್ತಾಪ ಈಗ ಸರಣಿ ಪೊಲೀಸ್ ದೂರುಗಳ ಹಂತ ತಲುಪಿದೆ. ಎರಡೂ ಕಡೆಯ ಆರೋಪಗಳ ಕುರಿತು ಪೊಲೀಸರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಮುಂದಿನ ತನಿಖೆಯಿಂದ ತಿಳಿಯಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button