Film & EntertainmentKannada NewsKarnataka NewsLatest

*ಗುಂಡಿನ ದಾಳಿ ಬೆನ್ನಲ್ಲೇ ₹9 ಕೋಟಿಗೆ ಫ್ಲಾಟ್ ಮಾರಿದ ನಟ ಟೈಗರ್ ಶ್ರಾಫ್*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ಬೆನ್ನಲ್ಲೇ, ಮುಂಬೈನ ಖಾರ್ ವೆಸ್ಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ ಅನ್ನು ₹9 ಕೋಟಿಗೆ ಮಾರಾಟ ಮಾಡಿದ್ದಾರೆ. CRE Matrix ಸಂಗ್ರಹಿಸಿರುವ ಆಸ್ತಿ ನೋಂದಣಿ ದಾಖಲೆಗಳ ಆಧಾರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಖಾರ್ ವೆಸ್ಟ್‌ನ ರುಸ್ತಮ್ಜಿ ಪ್ಯಾರಾಮೌಂಟ್ ಡಿ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ 9ನೇ ಮಹಡಿಯಲ್ಲಿರುವ ಈ ಫ್ಲಾಟ್ 1,291.14 ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದರ ಜೊತೆಗೆ 95.80 ಚದರ ಅಡಿಯ ವಿಶೇಷ ವಿಸ್ತೀರ್ಣವೂ ಇದೆ. ಫ್ಲಾಟ್ ಪ್ರತಿ ಚದರ ಅಡಿಗೆ ಸುಮಾರು ₹64,891 ದರದಲ್ಲಿ ಮಾರಾಟವಾಗಿದ್ದು, ವಹಿವಾಟಿಗೆ ಸಂಬಂಧಿಸಿದಂತೆ ₹54 ಲಕ್ಷ ಸ್ಟಾಂಪ್ ಡ್ಯೂಟಿ ಪಾವತಿಸಲಾಗಿದೆ. ಫ್ಲಾಟ್‌ನಲ್ಲಿ ಎರಡು ಕಾರು ಪಾರ್ಕಿಂಗ್ ಸ್ಥಳಗಳಿವೆ.

ಟೈಗರ್ ಶ್ರಾಫ್ 2018ರ ಜುಲೈನಲ್ಲಿ ₹7.61 ಕೋಟಿ ನೀಡಿ ಈ ಅಪಾರ್ಟ್‌ಮೆಂಟ್ ಖರೀದಿಸಿದ್ದರು. ಬಳಿಕ 2019ರ ನವೆಂಬರ್ 30ರಂದು ಫ್ಲಾಟ್‌ನ ಸ್ವಾಧೀನ ಪಡೆದಿದ್ದರು. ಇದೀಗ ಈ ಆಸ್ತಿಯನ್ನು ₹9 ಕೋಟಿಗೆ ಮಾರಾಟ ಮಾಡಿದ್ದಾರೆ.

ಇನ್ನೊಂದೆಡೆ, ಅಕ್ಟೋಬರ್ 18ರಂದು ಮುಂಬೈನ ಜುಹುವಿನ ಪುಷ್ಪಾ ಪಾರ್ಕ್ ಸಮೀಪ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಫುಟ್‌ಬಾಲ್ ಆಡಲು ತೆರಳಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತನೊಬ್ಬ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button