Film & EntertainmentKannada NewsKarnataka NewsLatest

*ಮೂರನೇ ಮದುವೆ ಆಗಿದ್ದಕ್ಕೆ ಆಮಿರ್ ಖಾನ್​ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ?*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟ ಆಮಿರ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದಿರುವ ಆರೋಪ ಕೇಳಿಬಂದಿದೆ. ನಟನನ್ನು ಗುರಿಯಾಗಿಸಿಕೊಂಡು ಗ್ಯಾಂಗ್‌ನ ಕೆಲವು ವ್ಯಕ್ತಿಗಳು ಮನೆ ಸುತ್ತಮುತ್ತ ಹಲವು ವಾರಗಳ ಕಾಲ ಕಣ್ಣಾವಲು ಇಟ್ಟಿದ್ದರು ಎಂಬ ಮಾಹಿತಿ ವರದಿಯಾಗಿದೆ. ಇತ್ತೀಚೆಗೆ ಟೈಗರ್ ಶ್ರಾಫ್ ನಿವಾಸದ ಬಳಿ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ವೇಳೆ ಈ ಬೆಳವಣಿಗೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಅರ್ಜು ಬಿಷ್ಣೋಯ್ ಮತ್ತು ಟೈಸನ್ ಬಿಷ್ಣೋಯ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ಸಂದೇಶವೊಂದು ಹರಿದಾಡುತ್ತಿದೆ. ಈ ಸಂದೇಶದಲ್ಲಿ ಆಮಿರ್ ಖಾನ್ ವಿರುದ್ಧ ‘ಲವ್ ಜಿಹಾದ್’ ಉತ್ತೇಜಿಸುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಬೆಳವಣಿಗೆ ಇದೀಗ ಬಾಲಿವುಡ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ವರದಿಯ ಪ್ರಕಾರ, ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದ ಕೆಲವು ಶಂಕಿತ ವ್ಯಕ್ತಿಗಳು ಆಮಿರ್ ಖಾನ್ ನಿವಾಸದ ಸುತ್ತಮುತ್ತ ಓಡಾಡಿದ್ದು, ಹಲವು ವಾರಗಳ ಕಾಲ ನಿಗಾ ಇಟ್ಟಿದ್ದರು ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಶಂಕಿತರು ನಟನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ಆದರೆ, ಬಳಿಕ ಯೋಜನೆಯನ್ನು ಕೈಬಿಟ್ಟು ಅಲ್ಲಿಂದ ತೆರಳಿದ್ದಾರೆ ಎಂದು ವರದಿಯಾಗಿದೆ.

ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ಹಲವು ಸುಳಿವುಗಳು ಸಿಕ್ಕಿದ್ದು, ಈ ಬೆಳವಣಿಗೆಯೂ ತನಿಖೆಯ ಭಾಗವಾಗಿ ಗಮನ ಸೆಳೆದಿದೆ. ಆಮಿರ್ ಖಾನ್ ಅವರನ್ನು ನೇರವಾಗಿ ಗುರಿಯಾಗಿಸಿಕೊಳ್ಳುವ ಉದ್ದೇಶ ಇತ್ತೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಬಂದಿಲ್ಲ.

ಈ ಬೆಳವಣಿಗೆಗಳ ಬೆನ್ನಲ್ಲೇ ಬಾಲಿವುಡ್ ನಟರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಪ್ರಮುಖ ಕಲಾವಿದರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ. ಆಮಿರ್ ಖಾನ್‌ಗೆ ಬಂದಿರುವುದಾಗಿ ಹೇಳಲಾಗುತ್ತಿರುವ ಬೆದರಿಕೆ ಮತ್ತು ನಟನ ನಿವಾಸದ ಸುತ್ತ ನಡೆದಿದ್ದ ಎನ್ನಲಾದ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button