*ರಾಹುಲ್ ಗಾಂಧಿ ವಿರುದ್ಧ ನಿತಿನ್ ನಬಿನ್ ವಾಗ್ದಾಳಿ:* *ಕಾಂಗ್ರೆಸ್ ದೇಶದ ಕ್ಷಮೆ ಕೇಳಲಿ ಎಂದ ಬಿಜೆಪಿ ಅಧ್ಯಕ್ಷ!*

ಪ್ರಗತಿವಾಹಿನಿ ಸುದ್ದಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸಾಂವಿಧಾನಿಕ ಸಂಸ್ಥೆಗಳ ಮೇಲೆಯೇ ನಂಬಿಕೆ ಇಲ್ಲದಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಆರೋಪಿಸಿದ್ದಾರೆ. ಸದನದಲ್ಲಿ ಪ್ರಶ್ನೆಗಳನ್ನು ಎತ್ತುವ ರಾಹುಲ್ ಗಾಂಧಿ, ಉತ್ತರಗಳನ್ನು ಎದುರಿಸುವ ಸಮಯ ಬಂದಾಗ ಸದನದಿಂದ ಹೊರಹೋಗುತ್ತಾರೆ ಎಂದು ಟೀಕಿಸಿದ್ದಾರೆ. ದೇಶದ ಜನರಿಗೆ ಪ್ರತಿಯೊಂದು ಸವಾಲನ್ನೂ ಎದುರಿಸುವ ಸಾಮರ್ಥ್ಯವಿದೆ ಎಂದೂ ಹೇಳಿದ್ದಾರೆ.
ಸುದ್ದಿವಾಹಿನಿಯೊಂದರ ಕಾನ್ಕ್ಲೇವ್ನಲ್ಲಿ ಮಾತನಾಡಿದ ನಿತಿನ್ ನಬಿನ್, ಕಾಂಗ್ರೆಸ್ ಕಾರ್ಯಕರ್ತರೊಬ್ಬರೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಉಲ್ಲೇಖಿಸಿದರು. ಕಾಂಗ್ರೆಸ್ನ ಕಾರ್ಯವೈಖರಿ ಹಾಗೂ ನಡೆಗಳನ್ನು ಗಮನಿಸಿದರೆ, ದೇಶಕ್ಕೆ ಸರಿಯಾದ ದಿಕ್ಕು ತೋರಿಸಲು ಬಿಜೆಪಿ ಮತ್ತು ಮೋದಿ ನಾಯಕತ್ವವೇ ಸಮರ್ಥವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
1984ರ ನವೆಂಬರ್ 1ರಂದು ದೆಹಲಿಯಲ್ಲಿ ಸಿಖ್ಖರ ಮೇಲೆ ನಡೆದ ದೌರ್ಜನ್ಯದ ವಿಚಾರವನ್ನು ಪ್ರಸ್ತಾಪಿಸಿದ ನಬಿನ್, ಈ ಘಟನೆಗಾಗಿ ಕಾಂಗ್ರೆಸ್ ಆಳವಾದ ಪಶ್ಚಾತ್ತಾಪ ವ್ಯಕ್ತಪಡಿಸಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದೇ ನವೆಂಬರ್ 1ರಂದು ಕಾಂಗ್ರೆಸ್ ಆಯೋಜಿಸುತ್ತಿರುವ ಪ್ರತಿಭಟನೆ ಪಕ್ಷದ ನೈಜ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಅವರ ರ್ಯಾಲಿಯನ್ನು ಮುಂದೂಡುವಂತೆ ದೆಹಲಿಯ ವ್ಯಾಪಾರಿಗಳು ಮನವಿ ಮಾಡಿದ್ದರೂ, ಅದನ್ನು ತಿರಸ್ಕರಿಸಲಾಗಿದೆ ಎಂದು ನಬಿನ್ ಆರೋಪಿಸಿದರು. ಗಾಂಧಿ ಕುಟುಂಬ ತೆಗೆದುಕೊಳ್ಳುವ ನಿರ್ಧಾರವೇ ಕಾಂಗ್ರೆಸ್ನಲ್ಲಿ ಅಂತಿಮವಾಗಿದ್ದು, ಪಕ್ಷದ ಅಧ್ಯಕ್ಷರಿಗೂ ನಿರ್ಧಾರಗಳಲ್ಲಿ ಹೆಚ್ಚಿನ ಅವಕಾಶವಿಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕ ವಿಧಾನಪರಿಷತ್ ಚುನಾವಣೆಗಳ ಫಲಿತಾಂಶವನ್ನೂ ಉಲ್ಲೇಖಿಸಿದ ನಬಿನ್, ಬ್ಯಾಲೆಟ್ ಪೇಪರ್ ಮೂಲಕ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಇವಿಎಂ ಯಂತ್ರಗಳ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಸವಾಲು ಹಾಕಿದ ಬಳಿಕ ಈ ವಿಚಾರದ ಕುರಿತು ಹೆಚ್ಚಿನ ಪ್ರಶ್ನೆಗಳು ಕೇಳಿಬಂದಿಲ್ಲ ಎಂದು ಟೀಕಿಸಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಬಗ್ಗೆಯೂ ನಬಿನ್ ಪ್ರಶ್ನೆ ಎತ್ತಿದರು. ಕೇರಳದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದಾಗ ರಾಹುಲ್ ಗಾಂಧಿ ಏಕೆ ಇದೇ ವಿಚಾರವನ್ನು ಪ್ರಶ್ನಿಸಲಿಲ್ಲ ಎಂದು ಕೇಳಿದರು. ಚುನಾವಣಾ ಪ್ರಕ್ರಿಯೆಯ ಮೇಲೆ ನಂಬಿಕೆ ಇಲ್ಲದಿದ್ದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸರ್ಕಾರಕ್ಕೆ ರಾಜೀನಾಮೆ ನೀಡುವಂತೆ ಏಕೆ ಸೂಚಿಸಲಿಲ್ಲ ಎಂದೂ ಪ್ರಶ್ನಿಸಿದರು.
ಪಶ್ಚಿಮ ಬಂಗಾಳದಲ್ಲಿ ಸೋಲು ಕಂಡಾಗ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಾರೆ. ಆದರೆ, ಕೇರಳದಲ್ಲಿ ಗೆಲುವು ಸಾಧಿಸಿದಾಗ ಇದೇ ವಿಚಾರದಲ್ಲಿ ಮೌನ ವಹಿಸುತ್ತಾರೆ ಎಂದು ನಬಿನ್ ಟೀಕಿಸಿದರು. ಚುನಾವಣಾ ಫಲಿತಾಂಶಗಳಿಗೆ ಅನುಗುಣವಾಗಿ ಪ್ರಜಾಪ್ರಭುತ್ವದ ಬಗ್ಗೆ ವಿಭಿನ್ನ ನಿಲುವು ತಳೆಯುವ ಪ್ರವೃತ್ತಿ ಇನ್ನು ಮುಂದೆ ನಡೆಯುವುದಿಲ್ಲ ಎಂಬುದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



