Film & EntertainmentKannada NewsKarnataka NewsLatest

*ದರ್ಶನ್‌ ಪುತ್ರನಿಗೆ ಹುಟ್ಟುಹಬ್ಬದ ಸಂಭ್ರಮ*: *ಮಗನಿಗೆ ವಿಜಯಲಕ್ಷ್ಮಿ ಭಾವನಾತ್ಮಕ ಶುಭಾಶಯ*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಪುತ್ರ ವಿನೀಶ್ ಇಂದು (ಅಕ್ಟೋಬರ್ 31) ತಮ್ಮ 18ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು ತಾಯಿ ವಿಜಯಲಕ್ಷ್ಮಿ ಮಗನಿಗೆ ಸಾಮಾಜಿಕ ಜಾಲತಾಣದ ಮೂಲಕ ಭಾವನಾತ್ಮಕವಾಗಿ ಶುಭಾಶಯ ಕೋರಿದ್ದಾರೆ.

ದರ್ಶನ್, ವಿಜಯಲಕ್ಷ್ಮಿ ಹಾಗೂ ವಿನೀಶ್ ಒಟ್ಟಿಗೆ ಇರುವ ಹಲವು ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ, ಮಗನಿಗೆ ಜೀವನದ ಮಹತ್ವದ ಸಲಹೆಗಳನ್ನೂ ನೀಡಿದ್ದಾರೆ.

“ನೀನು ಉತ್ತಮ ಚಾರಿತ್ರ್ಯ, ಧೈರ್ಯ ಮತ್ತು ದಯಾಗುಣವುಳ್ಳ ವ್ಯಕ್ತಿಯಾಗಿ ಬೆಳೆಯಲಿ. ಜೀವನವು ನಿನಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಪ್ರತಿಯೊಂದು ಸವಾಲನ್ನೂ ಧೈರ್ಯದಿಂದ ಎದುರಿಸು. ನಿನ್ನಲ್ಲಿರುವ ಒಳ್ಳೆಯತನವನ್ನು ಎಂದಿಗೂ ಕಳೆದುಕೊಳ್ಳಬೇಡ. ವಿನೀಶ್, ನಿನಗೆ 18ನೇ ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ಮಗನನ್ನು ಪ್ರೀತಿಯಿಂದ ‘ಬಂಗಾರ’ ಎಂದು ಸಂಬೋಧಿಸಿರುವ ವಿಜಯಲಕ್ಷ್ಮಿ ಅವರ ಪೋಸ್ಟ್‌ಗೆ ವಿನೀಶ್ ಕೂಡ ಹಾರ್ಟ್ ಇಮೋಜಿಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಕಳೆದೊಂದು ವಾರದಿಂದ ವಿಜಯಲಕ್ಷ್ಮಿ ಮತ್ತು ಧನ್ವೀರ್ ಗೌಡ ನಡುವಿನ ಜಟಾಪಟಿ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಈ ಬೆಳವಣಿಗೆಗಳ ನಡುವೆಯೂ ವಿಜಯಲಕ್ಷ್ಮಿ ಮಗನ ಹುಟ್ಟುಹಬ್ಬದ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್ನೊಂದೆಡೆ, ವಿನೀಶ್ ಅವರ 18ನೇ ಹುಟ್ಟುಹಬ್ಬದಂದು ತಂದೆ ದರ್ಶನ್ ಜೈಲಿನಲ್ಲಿದ್ದಾರೆ. ಧನ್ವೀರ್ ಗೌಡ ಜೊತೆಗಿನ ವಿವಾದದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಕಳೆದ ಎರಡು ವರ್ಷಗಳಿಂದ ದರ್ಶನ್ ಕುಟುಂಬ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ.

ಜೈಲಿಗೆ ಹೋಗುವ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ದರ್ಶನ್, ಮಗನನ್ನು ಚಿತ್ರರಂಗಕ್ಕೆ ಕರೆತರುವ ಆಸೆ ಇದೆ ಎಂದು ಹೇಳಿದ್ದರು. ಆದರೆ, ಮೊದಲು ಮಗ ಜೀವನದ ಕಷ್ಟಗಳನ್ನು ಅರಿತು, ಅವುಗಳಿಂದ ಪಾಠ ಕಲಿಯಬೇಕು. ಆ ಬಳಿಕವಷ್ಟೇ ಚಿತ್ರರಂಗಕ್ಕೆ ಬರಬೇಕು ಎಂಬುದು ತಮ್ಮ ಆಶಯ ಎಂದು ತಿಳಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರದ ವಿನೀಶ್, ಆಗಾಗ ಕೆಲವು ಯೂಟ್ಯೂಬರ್‌ಗಳ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬೈಕ್ ಮತ್ತು ಕಾರುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ವಿನೀಶ್, ಹಿಂದೆ ತಂದೆ ದರ್ಶನ್ ಜೊತೆ ಆಫ್‌ರೋಡಿಂಗ್ ಪ್ರವಾಸಗಳಲ್ಲೂ ಭಾಗವಹಿಸಿದ್ದರು. ಇದೀಗ 18ನೇ ವಯಸ್ಸಿಗೆ ಕಾಲಿಟ್ಟಿರುವ ವಿನೀಶ್‌ಗೆ ತಾಯಿಯ ಶುಭಾಶಯಗಳು ಗಮನ ಸೆಳೆದಿವೆ.

Related Articles

Back to top button