*ಜೈಲಿನಿಂದ 17 ಕೈದಿಗಳ ಎಸ್ಕೇಪ್*: *ಅಧಿಕಾರಿಗಳ ವಿರುದ್ಧ ಸಿಎಂ ವಿಜಯ್ ಕಠಿಣ ಕ್ರಮ, ಹಿರಿಯ ಅಧಿಕಾರಿಗಳ ವರ್ಗಾವಣೆ!*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ಉಪಜೈಲಿನಿಂದ 17 ಕೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ಮತ್ತು ಭದ್ರತಾ ಲೋಪದ ಆರೋಪದ ಮೇಲೆ ಜೈಲಿನ ಪ್ರಭಾರ ಅಧಿಕಾರಿಯನ್ನು ಅಮಾನತುಗೊಳಿಸಲು ಆದೇಶಿಸಿದ್ದಾರೆ. ಇದರ ಜೊತೆಗೆ ಜೈಲು ಇಲಾಖೆಯ ಹಲವು ಹಿರಿಯ ಅಧಿಕಾರಿಗಳ ವರ್ಗಾವಣೆಗೂ ಸರ್ಕಾರ ಮುಂದಾಗಿದೆ. ಪರಾರಿಯಾಗಿದ್ದ ಎಲ್ಲಾ 17 ಕೈದಿಗಳನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಜೈಲು ಭದ್ರತೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಕ್ಟೋಬರ್ 26ರಂದು ವೈದ್ಯಕೀಯ ತುರ್ತು ಪರಿಸ್ಥಿತಿಯ ನಾಟಕವಾಡಿದ ವಿಚಾರಣಾಧೀನ ಕೈದಿಗಳು, ಕರ್ತವ್ಯದಲ್ಲಿದ್ದ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಘಟನೆಯಿಂದ ರಾಜ್ಯದ ಜೈಲು ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದವು. ಈ ಘಟನೆ ತಮಿಳುನಾಡಿನ ಥೇಣಿ ಜಿಲ್ಲೆಯ ಉಪಜೈಲಿನಲ್ಲಿ ನಡೆದಿತ್ತು.
ಕೈದಿಗಳು ಪರಾರಿಯಾದ ಮಾಹಿತಿ ತಿಳಿಯುತ್ತಿದ್ದಂತೆ ತಮಿಳುನಾಡು ಪೊಲೀಸರು ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಹಲವು ಪೊಲೀಸ್ ತಂಡಗಳನ್ನು ರಚಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಲಾಗಿತ್ತು. ಡ್ರೋನ್ಗಳ ನೆರವಿನಿಂದ ಜೈಲಿನಿಂದ ದೂರದ ಪೊದೆಗಳಲ್ಲಿ ಅಡಗಿದ್ದ ಎಂಟು ಕೈದಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿತ್ತು. ಬಳಿಕ ಉಳಿದ ಕೈದಿಗಳನ್ನೂ ಸೆರೆಹಿಡಿಯಲಾಗಿದ್ದು, ಎಲ್ಲಾ 17 ಮಂದಿಯನ್ನು ಮತ್ತೆ ಬಂಧಿಸಲಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ವಿಜಯ್, ಜೈಲು ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ. ಕೈದಿಗಳ ಮೇಲೆ ಸರಿಯಾದ ನಿಗಾ ವಹಿಸದಿರುವುದು, ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ತೋರಿರುವುದು ಹಾಗೂ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳೇ ಘಟನೆಗೆ ಕಾರಣ ಎಂದು ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.
ಇದರ ಬೆನ್ನಲ್ಲೇ ಥೇಣಿ ಜಿಲ್ಲಾ ಉಪಜೈಲಿನ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದ ಉಪ ಜೈಲರ್ ಎನ್. ನಾಗೇಶ್ವರನ್ ಅವರನ್ನು ಅಕ್ಟೋಬರ್ 30ರಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. 2024ರ ಆಗಸ್ಟ್ 6ರಿಂದ ಅವರು ಈ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಕೈದಿಗಳು ಮತ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಮೇಲೆ ಸರಿಯಾದ ನಿಯಂತ್ರಣ ಹಾಗೂ ಮೇಲ್ವಿಚಾರಣೆ ವಹಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪದ ಮೇಲೆ ತಮಿಳುನಾಡು ನಾಗರಿಕ ಸೇವಾ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಇನ್ನು ಜೈಲು ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಹಿರಿಯ ಅಧಿಕಾರಿಗಳ ವರ್ಗಾವಣೆಗೂ ಸರ್ಕಾರ ಆದೇಶಿಸಿದೆ. ಮಧುರೈ ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿದ್ದ ಆರ್. ಕೃಷ್ಣರಾಜ್ ಅವರನ್ನು ಸೇಲಂ ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.
ಜೈಲು ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿ ವಿಜಯ್, ಪ್ರತಿಯೊಬ್ಬ ಅಧಿಕಾರಿಯೂ ಸಂಪೂರ್ಣ ಬದ್ಧತೆ, ಜಾಗರೂಕತೆ ಮತ್ತು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ, ಆಲಸ್ಯ ಅಥವಾ ಬೇಜವಾಬ್ದಾರಿತನ ತೋರಿದವರ ವಿರುದ್ಧ ಅತ್ಯಂತ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದಲ್ಲದೆ, ಜೈಲು ಇಲಾಖೆಯ ಉನ್ನತ ಮಟ್ಟದಲ್ಲೂ ಬದಲಾವಣೆ ಮಾಡಲಾಗಿದೆ. ಜೈಲುಗಳ ಪೊಲೀಸ್ ಮಹಾನಿರ್ದೇಶಕ ಸಂದೀಪ್ ರೈ ರಾಥೋಡ್ ಅವರನ್ನು ಟ್ಯಾಂಜೆಡ್ಕೊ ಸಂಸ್ಥೆಯ ಮುಖ್ಯ ಜಾಗೃತ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕೆ. ಶಂಕರ್ ಅವರನ್ನು ಜೈಲು ಮತ್ತು ಸುಧಾರಣಾ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.



