*ನೇಪಾಳ ಪ್ರವಾಸಕ್ಕೆ ಹೋದ 6 ಭಾರತೀಯರಿಗೆ ಸಂಕಷ್ಟ*: *ಹಿಮಪಾತದಲ್ಲಿ ಸಿಲುಕಿ ಪರದಾಟ*

ಪ್ರಗತಿವಾಹಿನಿ ಸುದ್ದಿ: ನೆರೆಯ ನೇಪಾಳದಲ್ಲಿ ಭಾರೀ ಹಿಮಪಾತದಿಂದಾಗಿ ಆರು ಭಾರತೀಯ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಪ್ರವಾಸಕ್ಕೆ ತೆರಳಿದ್ದ ವೇಳೆ ಹಿಮಪಾತ ತೀವ್ರಗೊಂಡಿದೆ. ಪರಿಣಾಮ, ಅಲ್ಲಿಂದ ಹೊರಬರಲು ಸಾಧ್ಯವಾಗದೆ ಸಿಲುಕಿಕೊಂಡಿದ್ದಾರೆ. ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಸೇನೆಯ ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಸಿದ್ಧತೆಯೂ ನಡೆದಿದೆ.
ಶೇ-ಫೋಕ್ಸುಂಡೋ ಗ್ರಾಮೀಣ ಪುರಸಭೆಯ 8ನೇ ವಾರ್ಡ್‌ನ ಧೋ ಪ್ರದೇಶಕ್ಕೆ ಪ್ರವಾಸಿಗರು ತೆರಳಿದ್ದರು. ಈ ಭಾಗದಲ್ಲಿ ಭಾರೀ ಪ್ರಮಾಣದ ಹಿಮಪಾತವಾಗಿದ್ದರಿಂದ ಅವರು ಮುಂದೆ ಸಾಗಲು ಅಥವಾ ವಾಪಸ್ ಬರಲು ಸಾಧ್ಯವಾಗಿಲ್ಲ. ಪ್ರವಾಸಿಗರು ಸಿಲುಕಿರುವ ಸ್ಥಳವನ್ನು ಈಗಾಗಲೇ ಪತ್ತೆಹಚ್ಚಲಾಗಿದೆ ಎಂದು ಡೋಲ್ಪಾ ಜಿಲ್ಲೆಯ ಮುಖ್ಯ ಜಿಲ್ಲಾ ಅಧಿಕಾರಿ ಜುನೂ ಧಕಾಲ್ ತಿಳಿಸಿದ್ದಾರೆ. ಈ ಘಟನೆ ಶೇ-ಫೋಕ್ಸುಂಡೋ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರವಾಸಿಗರು ಭದ್ರತಾ ಸಿಬ್ಬಂದಿ ಹಾಗೂ ನೇಪಾಳಿ ಮಾರ್ಗದರ್ಶಿ ನೀಡಿದ್ದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮುಂದುವರಿದಿದ್ದರು ಎನ್ನಲಾಗಿದೆ. ಹಿಮಪಾತದ ನಡುವೆಯೂ ಮಾರ್ಗದರ್ಶಿಯನ್ನು ಬಿಟ್ಟು ಸರೋವರದ ಕಡೆಗೆ ತೆರಳಿದ್ದರು. ಶನಿವಾರ ರಾತ್ರಿ ಅವರೊಂದಿಗೆ ಸಂಪರ್ಕ ಕಡಿತಗೊಂಡಿತ್ತು. ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿರುವ ಸಾಧ್ಯತೆಯ ಬಗ್ಗೆ ಮಾರ್ಗದರ್ಶಿ ಶನಿವಾರ ಸಂಜೆ ಜಿಲ್ಲಾ ಆಡಳಿತಕ್ಕೆ ಮಾಹಿತಿ ನೀಡಿದ್ದರು.
ಭಾನುವಾರ ಬೆಳಗ್ಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದರೂ, ಪ್ರವಾಸಿಗರು ಸಿಲುಕಿರುವ ಸ್ಥಳವನ್ನು ಪತ್ತೆಹಚ್ಚಲಾಗಿದೆ. ಹೀಗಾಗಿ ಅವರನ್ನು ನಾಪತ್ತೆಯಾಗಿದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೇನೆಯ ಹೆಲಿಕಾಪ್ಟರ್ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಸಂಕಷ್ಟಕ್ಕೆ ಸಿಲುಕಿರುವ ಆರು ಭಾರತೀಯರನ್ನು ಮೌಮಿತಾ ಹಲ್ದರ್, ಪಿಯಾಲಿ ಕೋಲೆ, ಜಜ್ಲಾ ತ್ರಿವೇದಿ ಕುಮಾರ್, ಆದಿತ್ಯ ಸಿಂಘಾ, ದೀಪ್ಲಿನಾ ಬಿಸ್ವಾಸ್ ಮತ್ತು ರಾಜೇಶ್ ಡೇ ಎಂದು ಗುರುತಿಸಲಾಗಿದೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.



