Film & EntertainmentKannada NewsKarnataka NewsLatest

*ಶಾರುಖ್ ಖಾನ್‌ಗೆ 61ನೇ ಹುಟ್ಟುಹಬ್ಬದ ಸಂಭ್ರಮ*: *10 ಸಾವಿರ ಕೋಟಿ ರೂ. ಸಾಮ್ರಾಜ್ಯದ ಹಿಂದಿನ ಉದ್ಯಮ ತಂತ್ರವೇನು?*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಇಂದು 61ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಶಾರುಖ್, ಸಿನಿಮಾ ಜಗತ್ತಿನಾಚೆಗೂ ಬೃಹತ್ ಉದ್ಯಮ ಸಾಮ್ರಾಜ್ಯ ಕಟ್ಟಿದ್ದಾರೆ. ಸಿನಿಮಾ ನಿರ್ಮಾಣ, ಕ್ರಿಕೆಟ್, ಜಾಹೀರಾತು, ತಂತ್ರಜ್ಞಾನ ಮತ್ತು ವಿವಿಧ ಹೂಡಿಕೆಗಳ ಮೂಲಕ ಆದಾಯ ಗಳಿಸುತ್ತಿದ್ದಾರೆ. ಹೂರುನ್ ಇಂಡಿಯಾ ಪಟ್ಟಿಯ ಪ್ರಕಾರ ಶಾರುಖ್ ಖಾನ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 10 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್

2002ರಲ್ಲಿ ಪತ್ನಿ ಗೌರಿ ಖಾನ್ ಜೊತೆ ಸೇರಿ ಶಾರುಖ್ ಖಾನ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಆರಂಭಿಸಿದರು. ಆರಂಭದಲ್ಲಿ ಸಿನಿಮಾ ನಿರ್ಮಾಣಕ್ಕೆ ಒತ್ತು ನೀಡಿದ್ದ ಸಂಸ್ಥೆ, ಬಳಿಕ ವಿಎಫ್‌ಎಕ್ಸ್ ಮತ್ತು ಸಿನಿಮಾ ವಿತರಣೆಯಲ್ಲೂ ತನ್ನ ಛಾಪು ಮೂಡಿಸಿತು. ಒಟಿಟಿ ವೇದಿಕೆಗಳಿಗೂ ಕಂಟೆಂಟ್ ಒದಗಿಸುವ ಮೂಲಕ ವಿವಿಧ ಮೂಲಗಳಿಂದ ಆದಾಯ ಗಳಿಸುತ್ತಿದೆ.

ಕೋಲ್ಕತ್ತಾ ನೈಟ್ ರೈಡರ್ಸ್

ಐಪಿಎಲ್ ಆರಂಭದಿಂದಲೂ ಶಾರುಖ್ ಖಾನ್ ಕ್ರಿಕೆಟ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಕೆಕೆಆರ್ ಬ್ರ್ಯಾಂಡ್ ಈಗ ಜಾಗತಿಕ ಮಟ್ಟಕ್ಕೂ ವಿಸ್ತರಿಸಿದೆ. ಕೆರಿಬಿಯನ್, ಯುಎಇ ಮತ್ತು ಅಮೆರಿಕದ ಕ್ರಿಕೆಟ್ ಲೀಗ್‌ಗಳಲ್ಲೂ ತಂಡಗಳನ್ನು ಹೊಂದಿದೆ. ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಸ್ವಂತ ಕ್ರಿಕೆಟ್ ಮೈದಾನವನ್ನೂ ಉದ್ಘಾಟಿಸಲಾಗಿದೆ.

ಜಾಹೀರಾತು ಜಗತ್ತಿನಲ್ಲೂ ಭಾರೀ ಬೇಡಿಕೆ

ಜಾಹೀರಾತು ಮಾರುಕಟ್ಟೆಯಲ್ಲಿ ಶಾರುಖ್ ಖಾನ್‌ಗೆ ದೊಡ್ಡ ಬೇಡಿಕೆಯಿದೆ. ಕಾರು, ರಿಯಲ್ ಎಸ್ಟೇಟ್, ಬ್ಯಾಂಕಿಂಗ್ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖ ಬ್ರ್ಯಾಂಡ್‌ಗಳ ಪ್ರಚಾರ ರಾಯಭಾರಿಯಾಗಿದ್ದಾರೆ. 2025ರ ವರದಿಗಳ ಪ್ರಕಾರ, 36ಕ್ಕೂ ಹೆಚ್ಚು ಪ್ರಮುಖ ಬ್ರ್ಯಾಂಡ್‌ಗಳನ್ನು ಶಾರುಖ್ ಪ್ರಚಾರ ಮಾಡುತ್ತಿದ್ದಾರೆ. ಇದರಿಂದಲೂ ದೊಡ್ಡ ಮಟ್ಟದ ಆದಾಯ ಗಳಿಸುತ್ತಿದ್ದಾರೆ.

ತಂತ್ರಜ್ಞಾನ ಮತ್ತು ವಿವಿಧ ಹೂಡಿಕೆಗಳು

ಶಾರುಖ್ ಖಾನ್ ತಮ್ಮ ಸಂಪತ್ತನ್ನು ಒಂದೇ ಕ್ಷೇತ್ರಕ್ಕೆ ಸೀಮಿತಗೊಳಿಸಿಲ್ಲ. ಮಕ್ಕಳ ಶೈಕ್ಷಣಿಕ ಮನರಂಜನಾ ಸಂಸ್ಥೆ ಕಿಡ್ಜಾನಿಯಾದಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ತಮ್ಮ ಫ್ಯಾಮಿಲಿ ಆಫೀಸ್ ಮೂಲಕ ವಿವಿಧ ನವೋದ್ಯಮಗಳಲ್ಲೂ ಹೂಡಿಕೆ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲೂ ಅವರ ಬಂಡವಾಳ ಹೂಡಿಕೆಯಾಗಿದೆ.

ಮಗನ ಜೊತೆ ಐಷಾರಾಮಿ ಬ್ರ್ಯಾಂಡ್ ಉದ್ಯಮ

ಮಗ ಆರ್ಯನ್ ಖಾನ್ ಜೊತೆ ಸೇರಿ ಶಾರುಖ್ ಖಾನ್ ಡಿ’ಯಾವೋಲ್ ಎಂಬ ಐಷಾರಾಮಿ ಲೈಫ್‌ಸ್ಟೈಲ್ ಬ್ರ್ಯಾಂಡ್ ಆರಂಭಿಸಿದ್ದಾರೆ. ಈ ಬ್ರ್ಯಾಂಡ್ ಅಡಿಯಲ್ಲಿ ಪ್ರೀಮಿಯಂ ಉಡುಪುಗಳು ಹಾಗೂ ಪಾನೀಯಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಜಾಗತಿಕ ಸಂಸ್ಥೆಗಳ ಜೊತೆಗಿನ ಸಹಯೋಗದ ಮೂಲಕ ಉದ್ಯಮವನ್ನು ವಿಸ್ತರಿಸಲಾಗುತ್ತಿದೆ.

ಮನ್ನತ್‌ನಿಂದ ದುಬೈವರೆಗೆ ಆಸ್ತಿ

ಶಾರುಖ್ ಖಾನ್ ಅವರ ರಿಯಲ್ ಎಸ್ಟೇಟ್ ಹೂಡಿಕೆಗಳೂ ಗಮನ ಸೆಳೆಯುತ್ತವೆ. ಮುಂಬೈನ ಪ್ರಸಿದ್ಧ ಮನ್ನತ್ ಬಂಗಲೆ ಅವರ ಪ್ರಮುಖ ಆಸ್ತಿಗಳಲ್ಲಿ ಒಂದು. ದುಬೈನ ಪಾಮ್ ಜುಮೇರಾದಲ್ಲೂ ಐಷಾರಾಮಿ ವಿಲ್ಲಾ ಹೊಂದಿದ್ದಾರೆ. ಲಂಡನ್‌ನಲ್ಲಿಯೂ ಆಸ್ತಿ-ಪಾಸ್ತಿಗಳಿವೆ.

ಸಿನಿಮಾಗಳಲ್ಲೂ ಲಾಭದ ಪಾಲು

ಉದ್ಯಮ ಸಾಮ್ರಾಜ್ಯ ಬೆಳೆಸಿದ್ದರೂ ಸಿನಿಮಾಗಳೇ ಶಾರುಖ್ ಅವರ ಪ್ರಮುಖ ಆದಾಯದ ಮೂಲಗಳಲ್ಲಿ ಒಂದಾಗಿವೆ. ನಟನೆಯ ಸಂಭಾವನೆಯ ಜೊತೆಗೆ ಕೆಲವು ಸಿನಿಮಾಗಳ ಲಾಭದಲ್ಲೂ ಪಾಲು ಪಡೆಯುವ ಒಪ್ಪಂದ ಮಾಡಿಕೊಳ್ಳುತ್ತಾರೆ. ಸಿನಿಮಾ ಹಕ್ಕುಗಳ ಮಾರಾಟದಿಂದಲೂ ಆದಾಯ ಗಳಿಸುತ್ತಾರೆ. ಹೀಗೆ ನಟನೆಯ ಜೊತೆಗೆ ಉದ್ಯಮವನ್ನೂ ಸಮರ್ಥವಾಗಿ ಮುನ್ನಡೆಸುತ್ತಿರುವ ಶಾರುಖ್ ಖಾನ್, ಬಾಲಿವುಡ್‌ನ ಯಶಸ್ವಿ ನಟ-ಉದ್ಯಮಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

Related Articles

Back to top button