*ನಂದಿನಿ ಹಾಲಿನ ದರ ಏರಿಕೆಯಲ್ಲಿ ಗೋಲ್‌ಮಾಲ್?* *ಹೇಳಿದ್ದು 8, ವಸೂಲಿ ಮಾಡ್ತಿರೋದು 12! ಉಳಿದ 5 ನಿಮ್ಮ ಜೇಬಿಗಾ? ಡಿಕೆ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಹಾಲಿನ ದರ ಏರಿಕೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಂದಿನಿ ಹಾಲಿನ ಪರಿಷ್ಕೃತ ದರದ ವಿಚಾರವಾಗಿ ಹೊಸ ವಿವಾದ ಶುರುವಾಗಿದೆ. ಸರ್ಕಾರ ಘೋಷಿಸಿದ್ದಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪ್ರತಿ ಲೀಟರ್ ಹಾಲಿಗೆ 8 ರೂಪಾಯಿ ಹೆಚ್ಚಳ ಎಂದು ಸರ್ಕಾರ ತಿಳಿಸಿದ್ದರೂ, ವಾಸ್ತವದಲ್ಲಿ 12 ರೂಪಾಯಿ ಏರಿಕೆಯಾಗಿದೆ ಎಂದು ಗ್ರಾಹಕರು ದೂರಿದ್ದಾರೆ.
ಕೆಎಂಎಫ್‌ನ ನಂದಿನಿ ಹಾಲು ಮತ್ತು ಮೊಸರಿನ ಪರಿಷ್ಕೃತ ದರ ನವೆಂಬರ್ 1ರಿಂದ ಜಾರಿಗೆ ಬಂದಿದೆ. ಸರ್ಕಾರದ ಘೋಷಣೆಯ ಪ್ರಕಾರ ಹಾಲಿನ ದರ ಪ್ರತಿ ಲೀಟರ್‌ಗೆ 8 ರೂಪಾಯಿ ಹಾಗೂ ಮೊಸರಿನ ದರ 14 ರೂಪಾಯಿ ಹೆಚ್ಚಳವಾಗಿದೆ. ಆದರೆ ಹೊಸ ದರ ಜಾರಿಯಾದ ಬಳಿಕ ಗ್ರಾಹಕರಿಗೆ ಮತ್ತಷ್ಟು ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಈ ವಿಚಾರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಧ್ವನಿ ಎತ್ತಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರತಾಪ್ ಸಿಂಹ, ಅರ್ಧ ಲೀಟರ್ ಹಾಲಿನ ಬೆಲೆ ನಿನ್ನೆ 27 ರೂಪಾಯಿ ಇತ್ತು. ಇಂದು 33 ರೂಪಾಯಿಯಾಗಿದೆ. ಅಂದರೆ 8 ರೂಪಾಯಿ ಬದಲಿಗೆ 12 ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಪ್ರಶ್ನಿಸಿರುವ ಪ್ರತಾಪ್ ಸಿಂಹ, 8 ರೂಪಾಯಿ ಹೆಚ್ಚಳದಲ್ಲಿ 7 ರೂಪಾಯಿಯನ್ನು ರೈತರಿಗೆ ನೀಡುತ್ತೇವೆ ಎಂದು ಹೇಳಿದ್ದೀರಿ. ಈಗ 12 ರೂಪಾಯಿ ವಸೂಲಿ ಮಾಡಿ, ರೈತರಿಗೆ 7 ರೂಪಾಯಿ ನೀಡಿ ಉಳಿದ 5 ರೂಪಾಯಿಯನ್ನು ನೀವೂ ಮತ್ತು ಸಂಪುಟ ಸಹೋದ್ಯೋಗಿಗಳೂ ಹಂಚಿಕೊಳ್ಳುತ್ತೀರಾ ಎಂದು ವ್ಯಂಗ್ಯವಾಡಿದ್ದಾರೆ.
ಪ್ರತಾಪ್ ಸಿಂಹ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರ ಪ್ರಶ್ನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಹಾಲಿನ ದರ ಏರಿಕೆ ವಿಚಾರದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ಸಮರ್ಪಕವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.



