Kannada NewsKarnataka NewsLatest

*ಹಾಲಿನ ದರ ಏರಿಕೆಗೆ ರೈತರ ಸಂಭ್ರಮ*: *ಚಿಮುಲ್ ಮೆಗಾ ಡೈರಿ ಮುಂದೆ ಸಿಎಂ, ಡಿಸಿಎಂ ಭಾವಚಿತ್ರಕ್ಕೆ ಹಾಲಿನ ಅಭಿಷೇಕ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳ ಘೋಷಿಸಿದ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಹಾಲು ಉತ್ಪಾದಕರು ಸಂಭ್ರಮಾಚರಣೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಚಿಮುಲ್) ನಿರ್ದೇಶಕರು ಹಾಗೂ ರೈತರು ನಂದಿ ಕ್ರಾಸ್‌ನಲ್ಲಿರುವ ಚಿಮುಲ್ ಮೆಗಾ ಡೈರಿ ಮುಂದೆ ಒಟ್ಟಾಗಿ ಸಂಭ್ರಮಿಸಿದ್ದಾರೆ.

ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿನ ದರದ ಮೇಲೆ ಹೆಚ್ಚುವರಿಯಾಗಿ 8 ರೂಪಾಯಿ ಹೆಚ್ಚಳ ಘೋಷಿಸಿದೆ. ಇದರಲ್ಲಿ 1 ರೂಪಾಯಿ ಹಾಲು ಒಕ್ಕೂಟಗಳಿಗೆ ಹಾಗೂ 7 ರೂಪಾಯಿ ನೇರವಾಗಿ ಹಾಲು ಉತ್ಪಾದಕ ರೈತರಿಗೆ ನೀಡುವುದಾಗಿ ಪ್ರಕಟಿಸಿದೆ. ಸರ್ಕಾರದ ಈ ನಿರ್ಧಾರದಿಂದ ಸಂತಸಗೊಂಡ ರೈತರು ಮತ್ತು ಚಿಮುಲ್ ನಿರ್ದೇಶಕರು ಡೈರಿ ಮುಂದೆ ಸಂಭ್ರಮಾಚರಣೆ ನಡೆಸಿದರು.

ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರ ಭಾವಚಿತ್ರಗಳಿಗೆ ಹಾಲಿನ ಅಭಿಷೇಕ ಮಾಡಿದರು. ಬಳಿಕ ರಾಜ್ಯ ಸರ್ಕಾರದ ಪರವಾಗಿ ಜೈಕಾರ ಕೂಗಿ ನಿರ್ಧಾರವನ್ನು ಸ್ವಾಗತಿಸಿದರು.

ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಈ ದರ ಏರಿಕೆಯಿಂದ ಆರ್ಥಿಕವಾಗಿ ಅನುಕೂಲವಾಗಲಿದೆ ಎಂದು ಚಿಮುಲ್ ನಿರ್ದೇಶಕ ಅಶ್ವಸ್ಥನಾರಾಯಣ ಬಾಬು, ಭರಣಿ ವೆಂಕಟೇಶ ಹಾಗೂ ರೈತರು ಹರ್ಷ ವ್ಯಕ್ತಪಡಿಸಿದರು. ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ಘೋಷಿಸಿರುವ 7 ರೂಪಾಯಿ ನೇರವಾಗಿ ರೈತರ ಕೈ ಸೇರುವುದರಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ನೆರವು ಸಿಗಲಿದೆ ಎಂದು ಸಂತಸ ಹಂಚಿಕೊಂಡರು.

Related Articles

Back to top button