*ಹಣದ ವಿಚಾರಕ್ಕೆ ಗಲಾಟೆ*: *ಮಧ್ಯಸ್ಥಿಕೆ ವಹಿಸಲು ಹೋದ ಯುವಕನ ಕತ್ತು ಸೀಳಿ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಇಬ್ಬರ ನಡುವಿನ ಜಗಳ ಬಿಡಿಸಲು ಹೋದ ಯುವಕನೊಬ್ಬ ಕೊನೆಗೆ ಹೆಣವಾಗಿ ಹೋಗಿದ್ದಾನೆ. ಹಣದ ವಿಚಾರಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, 25 ವರ್ಷದ ಯುವಕನನ್ನು ಡ್ರ್ಯಾಗರ್ನಿಂದ ಕತ್ತು ಸೀಳಿ ಹತ್ಯೆ ಮಾಡಲಾಗಿದೆ.
ಮದ್ದೂರು ಪಟ್ಟಣದ ನಂದನ್ ಕೊಲೆಯಾದ ಯುವಕ. ರಘು ಮತ್ತು ಪ್ರಕಾಶ್ ಎಂಬುವವರ ನಡುವೆ ಹಣದ ವಿಚಾರಕ್ಕೆ ಜಗಳ ನಡೆದಿತ್ತು. ಈ ವೇಳೆ ಪ್ರಕಾಶ್ ಜೊತೆಗಿದ್ದ ನಂದನ್, ಇಬ್ಬರ ನಡುವಿನ ಗಲಾಟೆಯನ್ನು ಬಿಡಿಸಲು ಮಧ್ಯಸ್ಥಿಕೆ ವಹಿಸಿದ್ದಾನೆ.
ಆದರೆ, ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಈ ವೇಳೆ ಆರೋಪಿ ಶಿವರಾಜು ಡ್ರ್ಯಾಗರ್ನಿಂದ ನಂದನ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಧನುಷ್, ಶಿವರಾಜು ಮತ್ತು ನಿಖಿಲ್ ಕೂಡ ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಘಟನೆ ನಡೆದಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ನಂದನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮದ್ದೂರು ಪಟ್ಟಣದ ಕೆಮ್ಮಣ್ಣು ನಾಲೆ ಪ್ರದೇಶದ ಸಿದ್ಧಾರ್ಥ ನಗರದಲ್ಲಿ ಈ ಘಟನೆ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಮದ್ದೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಒಟ್ಟಿನಲ್ಲಿ, ಇಬ್ಬರ ನಡುವಿನ ಹಣದ ವಿಚಾರದ ಜಗಳ ಬಿಡಿಸಲು ಹೋದ ಯುವಕನೇ ಪ್ರಾಣ ಕಳೆದುಕೊಂಡಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.



