*ಇಂದು ರೈತರ ಖಾತೆಗೆ ₹2,500 ಬೆಳೆ ಪರಿಹಾರ*: *17 ಷರತ್ತುಗಳೊಂದಿಗೆ ಸರ್ಕಾರದಿಂದ ಹಣ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ರಾಜ್ಯ ಸರ್ಕಾರ ಕೊನೆಗೂ ಮಧ್ಯಂತರ ಬೆಳೆ ಪರಿಹಾರ ನೀಡಲು ಮುಂದಾಗಿದೆ. ಇಂದು ನವೆಂಬರ್ 5ರಂದು ಮೊದಲ ಹಂತದ ಪರಿಹಾರ ವಿತರಣೆಗೆ ಚಾಲನೆ ಸಿಗಲಿದೆ. ಅರ್ಹ ರೈತರ ಖಾತೆಗೆ ಗರಿಷ್ಠ 2,500 ರೂಪಾಯಿ ಜಮೆಯಾಗಲಿದ್ದು, ಹಣ ಪಡೆಯಲು ರೈತರು ಕೆಲವು ಪ್ರಮುಖ ಷರತ್ತುಗಳನ್ನು ಪೂರೈಸಿರಬೇಕು.
ವಿಧಾನಸೌಧದಲ್ಲಿ ಮಧ್ಯಾಹ್ನ 12.30ಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರಿಹಾರ ವಿತರಣೆಗೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಸರ್ಕಾರ ಮಧ್ಯಂತರ ಬೆಳೆ ಪರಿಹಾರವಾಗಿ 2,500 ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಇದೀಗ ಅದನ್ನು ಜಾರಿಗೆ ತರಲು ಅಧಿಕೃತ ಆದೇಶ ಹೊರಡಿಸಲಾಗಿದೆ. ರಾಜ್ಯದ 226 ಬರಪೀಡಿತ ತಾಲೂಕುಗಳ ಸುಮಾರು 45ರಿಂದ 50 ಲಕ್ಷ ರೈತರಿಗೆ ಈ ನೆರವು ಸಿಗುವ ನಿರೀಕ್ಷೆಯಿದೆ.
ಆದರೆ, ಈ ಪರಿಹಾರ ಎಲ್ಲ ರೈತರಿಗೂ ಸಿಗುವುದಿಲ್ಲ. ಅರ್ಹ ಫಲಾನುಭವಿಗಳನ್ನು ಗುರುತಿಸಲು ಸರ್ಕಾರ 17 ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಮೊದಲನೆಯದಾಗಿ, ರೈತರು FRUITS ತಂತ್ರಾಂಶದಲ್ಲಿ ನೋಂದಣಿಯಾಗಿದ್ದು, Farmer ID ಹೊಂದಿರಬೇಕು. ಬರ ಘೋಷಣೆಯಾಗಿರುವ ತಾಲೂಕು ಮತ್ತು ಬೆಳೆಗಳಿಗೆ ಮಾತ್ರ ಪರಿಹಾರ ಅನ್ವಯವಾಗಲಿದೆ.
ಜಿಲ್ಲಾಧಿಕಾರಿಗಳು ನಡೆಸಿರುವ ಬೆಳೆ ಸಮೀಕ್ಷೆಯ ವಿವರಗಳು ದಾಖಲಾಗಿರಬೇಕು. ಮಳೆಯಾಶ್ರಿತ, ನೀರಾವರಿ ಮತ್ತು ಬಹುವಾರ್ಷಿಕ ಬೆಳೆಗಳ ಮಾಹಿತಿಯ ಆಧಾರದ ಮೇಲೆ SDRF ಮಾರ್ಗಸೂಚಿಯಂತೆ ಪರಿಹಾರ ಲೆಕ್ಕ ಹಾಕಲಾಗುತ್ತದೆ. ಆಧಾರ್ ಜೋಡಣೆಯಾಗಿರುವ ಅರ್ಹ ರೈತರ ಖಾತೆಗೆ ನೇರ ನಗದು ವರ್ಗಾವಣೆ ಅಂದರೆ DBT ಮೂಲಕ ಹಣ ಜಮೆಯಾಗಲಿದೆ.
ಇನ್ನು ಕೃಷಿ ಜಮೀನು ಭೂಸ್ವಾಧೀನಕ್ಕೆ ಒಳಪಟ್ಟಿದ್ದರೆ ಪರಿಹಾರ ಸಿಗುವುದಿಲ್ಲ. ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಯಾದ ಜಮೀನುಗಳಿಗೂ ಹಣ ನೀಡುವುದಿಲ್ಲ. ಸರ್ಕಾರಿ ಜಮೀನುಗಳನ್ನು ಪರಿಹಾರ ಪಟ್ಟಿಯಿಂದ ಹೊರಗಿಡಲಾಗುತ್ತದೆ. RTCಯಲ್ಲಿ ಭೂ ಪರಿವರ್ತನೆ ದಾಖಲಾಗದಿದ್ದರೂ ಬೆಳೆ ಸಮೀಕ್ಷೆಯಲ್ಲಿ NA ಎಂದು ನಮೂದಾಗಿರುವ ಜಮೀನುಗಳನ್ನೂ ಪರಿಗಣಿಸುವುದಿಲ್ಲ.
ಜಂಟಿ ಖಾತೆ ಹೊಂದಿರುವ ಜಮೀನುಗಳಲ್ಲಿ FRUITS ತಂತ್ರಾಂಶದಲ್ಲಿ ನೋಂದಣಿಯಾದ ವ್ಯಕ್ತಿಗೆ ಮಾತ್ರ ಪರಿಹಾರ ಪಾವತಿಯಾಗಲಿದೆ. ಒಂದೇ ಜಮೀನಿನಲ್ಲಿ ಹಲವು ಮಾಲೀಕರಿದ್ದರೆ ಎರಡು ಬಾರಿ ಹಣ ಪಾವತಿಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಒಂದೇ ಜಮೀನಿಗೆ ಒಂದೇ ವ್ಯಕ್ತಿಗೆ ಎರಡು ಬಾರಿ ಪರಿಹಾರ ಸಿಗದಂತೆ ಪರಿಶೀಲನೆ ನಡೆಸಲಾಗುತ್ತದೆ.
ರೈತರು ಎರಡು ಅಥವಾ ಅದಕ್ಕಿಂತ ಹೆಚ್ಚು ತಾಲೂಕುಗಳಲ್ಲಿ ಜಮೀನು ಹೊಂದಿದ್ದರೂ ಒಟ್ಟಾರೆ ಗರಿಷ್ಠ ಎರಡು ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ಪರಿಹಾರ ನೀಡಲಾಗುತ್ತದೆ. ಒಂದೇ ಜಮೀನಿನಲ್ಲಿ ಒಂದಕ್ಕಿಂತ ಹೆಚ್ಚು ಬೆಳೆ ಬೆಳೆದಿದ್ದರೆ, ಸಮೀಕ್ಷೆಯ ಪ್ರಕಾರ ಗರಿಷ್ಠ ಪ್ರಮಾಣದಲ್ಲಿ ಬೆಳೆದ ಬೆಳೆಗೆ ಮಾತ್ರ ಪರಿಹಾರ ಲೆಕ್ಕಾಚಾರ ಅನ್ವಯವಾಗಲಿದೆ.
RTCಯಲ್ಲಿರುವ ಹೆಸರು ಮತ್ತು ಬೆಳೆ ಸಮೀಕ್ಷೆಯಲ್ಲಿರುವ ಹೆಸರಿನಲ್ಲಿ ವ್ಯತ್ಯಾಸವಿದ್ದರೆ ಗ್ರಾಮ ಆಡಳಿತಾಧಿಕಾರಿಗಳು ಮೂರು ದಿನಗಳೊಳಗೆ ಸ್ಥಳೀಯ ಪರಿಶೀಲನೆ ನಡೆಸಿ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ವರದಿ ದಾಖಲಿಸಬೇಕು. ಆಧಾರ್ ಮತ್ತು RTCಯಲ್ಲಿನ ಹೆಸರುಗಳಲ್ಲಿ ಶೇ.70ಕ್ಕಿಂತ ಹೆಚ್ಚು ಹೊಂದಾಣಿಕೆ ಇಲ್ಲದಿದ್ದರೆ ತಹಶೀಲ್ದಾರರು ಐದು ದಿನಗಳಲ್ಲಿ ಪರಿಶೀಲನೆ ನಡೆಸಬೇಕು.
ಇದಲ್ಲದೆ, ಪರಿಹಾರ ವಿತರಣೆಗೂ ಮುನ್ನ ಜಿಲ್ಲಾಧಿಕಾರಿಗಳು ಎಲ್ಲಾ ನಿಯಮಗಳನ್ನು ಪರಿಶೀಲಿಸಿ ಡಿಜಿಟಲ್ ಸಹಿ ಮೂಲಕ ಅಂತಿಮ ಅನುಮೋದನೆ ನೀಡಬೇಕು. ಜಿಲ್ಲೆ, ತಾಲೂಕು, ಗ್ರಾಮ ಮತ್ತು ಫಲಾನುಭವಿವಾರು ವಿತರಿಸಿದ ಹಣದ ಸಂಪೂರ್ಣ ದಾಖಲೆಗಳನ್ನು ಭೂಮಿ ಸೆಲ್ ನಿರ್ವಹಿಸಲಿದೆ.
ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾದ ಜಮೀನು, ಸರ್ಕಾರಿ ಜಮೀನು ಹಾಗೂ ನೀರಾವರಿ ಯೋಜನೆಗಳಿಗಾಗಿ ಈಗಾಗಲೇ ಭೂಸ್ವಾಧೀನಪಡಿಸಿಕೊಂಡು ಪರಿಹಾರ ಪಡೆದಿರುವ ಜಮೀನುಗಳು ಈ ನೆರವಿಗೆ ಅರ್ಹವಾಗುವುದಿಲ್ಲ.
ಇನ್ನು ಕೇಂದ್ರ ಸರ್ಕಾರದಿಂದ NDRF ಅನುದಾನ ಬಿಡುಗಡೆಯಾಗುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನದೇ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಈ ತಾತ್ಕಾಲಿಕ ನೆರವು ನೀಡುತ್ತಿದೆ. ಇದಕ್ಕಾಗಿ ಸುಮಾರು 1,250 ಕೋಟಿ ರೂಪಾಯಿ ವೆಚ್ಚವಾಗಲಿದೆ. ಕೇಂದ್ರದಿಂದ ಪೂರ್ಣ ಅನುದಾನ ಬಂದ ಬಳಿಕ ಅರ್ಹ ರೈತರಿಗೆ ಉಳಿದ ಹೆಚ್ಚುವರಿ ಪರಿಹಾರವನ್ನು ಜಮೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.



