*ನಂದಿನಿ ತುಪ್ಪ, ಬೆಣ್ಣೆ, ಪನ್ನೀರ್ ದರ ಏರಿಕೆ*: *ಇಂದಿನಿಂದಲೇ ಹೊಸ ಬೆಲೆ ಜಾರಿ*

ಪ್ರಗತಿವಾಹಿನಿ ಸುದ್ದಿ: ಹಾಲು ಮತ್ತು ಮೊಸರಿನ ದರ ಬದಲಾವಣೆಯ ಬೆನ್ನಲ್ಲೇ ಇದೀಗ ನಂದಿನಿಯ ಮತ್ತಷ್ಟು ಉತ್ಪನ್ನಗಳ ಬೆಲೆಯಲ್ಲೂ ಪರಿಷ್ಕರಣೆಯಾಗಿದೆ. ತುಪ್ಪ, ಬೆಣ್ಣೆ ಮತ್ತು ಪನ್ನೀರ್ ಖರೀದಿಸುವ ಗ್ರಾಹಕರಿಗೆ ಹೊಸ ದರದ ಬಿಸಿ ತಟ್ಟಲಿದೆ. ಬೆಂಗಳೂರು ಹಾಲು ಒಕ್ಕೂಟ ಪರಿಷ್ಕೃತ ದರಪಟ್ಟಿ ಪ್ರಕಟಿಸಿದ್ದು, ಇಂದಿನಿಂದಲೇ ಹೊಸ ಬೆಲೆಗಳು ಜಾರಿಗೆ ಬಂದಿವೆ.
ತುಪ್ಪದ 200 ಮಿಲಿ ಪ್ಯಾಕ್‌ಗೆ 95 ರೂಪಾಯಿ, 500 ಮಿಲಿ ಪ್ಯಾಕ್‌ಗೆ 425 ರೂಪಾಯಿ ಹಾಗೂ ಒಂದು ಲೀಟರ್ ಪ್ಯಾಕ್‌ಗೆ 850 ರೂಪಾಯಿ ನಿಗದಿಪಡಿಸಲಾಗಿದೆ. ಐದು ಲೀಟರ್ ತುಪ್ಪದ ಪ್ಯಾಕ್‌ಗೆ 4,250 ರೂಪಾಯಿ ದರ ನಿಗದಿಯಾಗಿದೆ. ಇನ್ನು 15 ಕೆ.ಜಿ. ತುಪ್ಪದ ಟಿನ್‌ಗೆ 4,100 ರೂಪಾಯಿ ಬೆಲೆ ಪ್ರಕಟಿಸಲಾಗಿದೆ.
ಬೆಣ್ಣೆಯ ದರದಲ್ಲೂ ಪರಿಷ್ಕರಣೆಯಾಗಿದೆ. 100 ಗ್ರಾಂ ಸಾಲ್ಟೆಡ್ ಬಟರ್‌ಗೆ 90 ರೂಪಾಯಿ, 500 ಗ್ರಾಂ ಪ್ಯಾಕ್‌ಗೆ 380 ರೂಪಾಯಿ ನಿಗದಿಯಾಗಿದೆ. ಅನ್‌ಸಾಲ್ಟೆಡ್ ಬಟರ್‌ನ 200 ಗ್ರಾಂ ಪ್ಯಾಕ್‌ಗೆ 160 ರೂಪಾಯಿ ಹಾಗೂ 500 ಗ್ರಾಂ ಪ್ಯಾಕ್‌ಗೆ 390 ರೂಪಾಯಿ ದರ ನಿಗದಿಪಡಿಸಲಾಗಿದೆ. ಬ್ಲಿಸ್ಟರ್ ಪ್ಯಾಕ್‌ನ 10 ಗ್ರಾಂ ಉತ್ಪನ್ನಕ್ಕೆ 900 ರೂಪಾಯಿ ಎಂದು ದರಪಟ್ಟಿಯಲ್ಲಿ ನಮೂದಿಸಲಾಗಿದೆ.
ಇನ್ನು ಪನ್ನೀರ್ ಖರೀದಿಸುವವರಿಗೂ ಹೊಸ ದರ ಅನ್ವಯವಾಗಲಿದೆ. 200 ಗ್ರಾಂ ಪ್ಯಾಕ್‌ಗೆ 115 ರೂಪಾಯಿ, 500 ಗ್ರಾಂ ಪ್ಯಾಕ್‌ಗೆ 260 ರೂಪಾಯಿ ಹಾಗೂ ಒಂದು ಕೆ.ಜಿ. ಪ್ಯಾಕ್‌ಗೆ 485 ರೂಪಾಯಿ ನಿಗದಿಯಾಗಿದೆ. ಮೀಡಿಯಂ ಫ್ಯಾಟ್ ಪನ್ನೀರ್‌ನ 200 ಗ್ರಾಂ ಪ್ಯಾಕ್‌ಗೆ 110 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ತುಪ್ಪದ ಪ್ಯಾಕೇಜಿಂಗ್ ಆಧಾರದಲ್ಲೂ ದರ ವ್ಯತ್ಯಾಸವಿದೆ. 200 ಮಿಲಿ ಸ್ಯಾಚೆಟ್‌ಗೆ 95 ರೂಪಾಯಿ, ಪೆಟ್ ಜಾರ್‌ಗೆ 180 ರೂಪಾಯಿ. 500 ಮಿಲಿ ಸ್ಯಾಚೆಟ್‌ಗೆ 425 ರೂಪಾಯಿ, ಪೆಟ್ ಜಾರ್‌ಗೆ 435 ರೂಪಾಯಿ. ಒಂದು ಲೀಟರ್ ಸ್ಯಾಚೆಟ್‌ಗೆ 850 ರೂಪಾಯಿ ಹಾಗೂ ಪೆಟ್ ಜಾರ್‌ಗೆ 870 ರೂಪಾಯಿ ದರ ಪ್ರಕಟಿಸಲಾಗಿದೆ.
ಹೀಗಾಗಿ ನಂದಿನಿ ತುಪ್ಪ, ಬೆಣ್ಣೆ ಮತ್ತು ಪನ್ನೀರ್ ಖರೀದಿಸುವ ಗ್ರಾಹಕರು ಇಂದಿನಿಂದ ಹೊಸ ದರವನ್ನು ಗಮನಿಸಬೇಕಿದೆ.



