Film & EntertainmentKannada NewsKarnataka NewsLatest

*ರಾವಣನ ಪಾತ್ರದಲ್ಲಿ ಯಶ್ ಮ್ಯಾಜಿಕ್*: *ಮಗನ ಸಾಧನೆ ಕಂಡು ಪುಷ್ಪಾ ಭಾವುಕ ಸಂದೇಶ*

ಪ್ರಗತಿವಾಹಿನಿ ಸುದ್ದಿ: ‘ರಾಮಾಯಣ’ ಸಿನಿಮಾದಲ್ಲಿ ಯಶ್ ರಾವಣನ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮಗನ ಸಾಧನೆ ಕಂಡು ತಾಯಿ ಪುಷ್ಪ ಭಾವುಕರಾಗಿದ್ದಾರೆ. ವರ್ಷಗಳ ಪರಿಶ್ರಮಕ್ಕೆ ಈಗ ಜನರ ಪ್ರೀತಿ ಮತ್ತು ಮೆಚ್ಚುಗೆ ಸಿಗುತ್ತಿರುವುದನ್ನು ಕಂಡು ಸಂತೋಷ ವ್ಯಕ್ತಪಡಿಸಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡಿದ್ದಾರೆ.

ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿರುವ ‘ರಾಮಾಯಣ’ ಸಿನಿಮಾ ಕುರಿತು ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದ ಅದ್ಧೂರಿ ದೃಶ್ಯಗಳು ಮತ್ತು ರಾವಣನ ಪಾತ್ರದಲ್ಲಿ ಯಶ್ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಯಶ್ ಅವರ ನಟನೆ ಸಿನಿಪ್ರಿಯರ ಗಮನ ಸೆಳೆದಿದೆ.

ಇದೇ ಸಂದರ್ಭದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಯಶ್ ತಾಯಿ ಪುಷ್ಪ, ಮಗನ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. “ಒಬ್ಬ ತಾಯಿಗೆ ಇದಕ್ಕಿಂತ ಹೆಚ್ಚಿನ ಸಂತೋಷ ಇನ್ನೇನು ಬೇಕು? ತನ್ನ ಮಗ ತಾನು ಕಂಡ ಪ್ರತಿಯೊಂದು ಕನಸನ್ನೂ ನನಸಾಗಿಸಿಕೊಂಡು, ಸಾಧನೆಯ ಶಿಖರವೇರಿ, ಜನರ ಅಪಾರ ಪ್ರೀತಿ ಮತ್ತು ಮೆಚ್ಚುಗೆ ಗಳಿಸುತ್ತಿರುವುದನ್ನು ನೋಡುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, “ಎಲ್ಲರೂ ಕಾತುರದಿಂದ ಕಾಯುತ್ತಿದ್ದ ‘ರಾಮಾಯಣ’ ಸಿನಿಮಾ ಇಂದು ಬಿಡುಗಡೆಯಾಗಿದೆ. ರಾವಣನ ಪಾತ್ರದಲ್ಲಿ ನಿನ್ನ ಅದ್ಭುತ ಅಭಿನಯಕ್ಕೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ಮತ್ತು ಅಭಿಮಾನ ಕಂಡು ನನ್ನ ಸಂತೋಷಕ್ಕೆ ಪಾರವೇ ಇಲ್ಲ. ನಿನ್ನ ಸಾಧನೆ, ಪರಿಶ್ರಮ ಮತ್ತು ಅಭಿನಯಕ್ಕೆ ತಾಯಿಯಾಗಿ ಹೃತ್ಪೂರ್ವಕ ಅಭಿನಂದನೆಗಳು. ಸಿನಿಮಾ ದೊಡ್ಡ ಯಶಸ್ಸು ಕಾಣಲಿ. ನಿನಗೂ ಇಡೀ ಚಿತ್ರತಂಡಕ್ಕೂ ಶುಭಾಶಯಗಳು. ಹೀಗೆಯೇ ಇನ್ನಷ್ಟು ಎತ್ತರಕ್ಕೆ ಬೆಳೆದು ನಮ್ಮೆಲ್ಲರ ಹೆಮ್ಮೆ ಮತ್ತು ಸಂತೋಷಕ್ಕೆ ಕಾರಣವಾಗಿರು ಮಗನೇ” ಎಂದು ಭಾವುಕವಾಗಿ ಹಾರೈಸಿದ್ದಾರೆ.

ಯಶ್ ತಾಯಿ ಪುಷ್ಪ ಸಿನಿಮಾ ನಿರ್ಮಾಪಕಿ ಮತ್ತು ವಿತರಕಿಯೂ ಹೌದು. ಈ ಹಿಂದೆ ಪುತ್ರನ ಬಗ್ಗೆ ನಿರ್ಮಾಪಕ ಅಲ್ಲು ಅರವಿಂದ್ ನೀಡಿದ್ದ ಹೇಳಿಕೆಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದ ಪುಷ್ಪ, ಇದೀಗ ಮಗನ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಇನ್ನು ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರ ನಿರ್ವಹಿಸುವುದರ ಜೊತೆಗೆ ಯಶ್ ಸಹ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಈ ಪಾತ್ರಕ್ಕಾಗಿ ಸಾಕಷ್ಟು ಪರಿಶ್ರಮ ಮತ್ತು ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ. ಇದೀಗ ತಾಯಿಯ ಭಾವುಕ ಸಂದೇಶ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

Related Articles

Back to top button