Belagavi NewsBelgaum NewsKannada NewsKarnataka News

*‌ನಿಷೇಧಾಜ್ಞೆ ಧಿಕ್ಕರಿಸಿ ವಿವಿಧೆಡೆ ರೈತರ ಪ್ರತಿಭಟನೆ*: *ಹೋರಾಟಗಾರರು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. 

ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಅವರನ್ನು ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಬೆಳಗಾವಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಧಿಕ್ಕರಿಸಿ ಪ್ರತಿಭಟನೆ ಮುಂದುವರಿಸಿದ ರೈತರನ್ನು ಪೊಲೀಸರು ಸಾಮೂಹಿಕವಾಗಿ ವಶಕ್ಕೆ ಪಡೆದರು.

ಚನ್ನಮ್ಮ ವೃತ್ತದಲ್ಲಿ ಎರಡು ತಾಸು ಹೈಡ್ರಾಮಾ

ಚೂನಪ್ಪ ಪೂಜಾರಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರೈತರ ಗುಂಪು ಏಕಾಏಕಿ ನಗರದ ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿತು. ಚೂನಪ್ಪ ಅವರನ್ನು ಬಿಡುಗಡೆ ಮಾಡುವವರೆಗೂ ಸಂಚಾರ ಬಂದ್ ಮಾಡುವುದಾಗಿ ಘೋಷಣೆ ಕೂಗಿದ ರೈತರು ಪ್ರತಿಭಟನೆ ಆರಂಭಿಸಿದರು.

ಈ ವೇಳೆ ವಶಕ್ಕೆ ಪಡೆದ ರೈತರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನವನ್ನು ತಡೆದ ಪ್ರತಿಭಟನಾಕಾರರು, ವಾಹನದಲ್ಲಿದ್ದ ರೈತರನ್ನು ಕೆಳಗಿಳಿಸುವಂತೆ ಒತ್ತಾಯಿಸಿದರು. ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ವಾಹನಕ್ಕೆ ಅಡ್ಡಿಪಡಿಸಿದರು. ಕೆಲಕಾಲ ಪೊಲೀಸರನ್ನು ಹಿಂದಕ್ಕೆ ಸರಿಸಿ ವಾಹನದಲ್ಲಿದ್ದ ರೈತರನ್ನು ಕೆಳಗಿಳಿಸಿದರು.

ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಾಲ್ಕು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ತೀವ್ರ ನೂಕಾಟ, ತಳ್ಳಾಟ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ಬೆನ್ನಟ್ಟಿ ಹಿಡಿದು ವಾಹನಗಳಿಗೆ ಹತ್ತಿಸಿದರು. ಪೊಲೀಸ್ ವಾಹನಗಳು ಸಾಲದಾದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ತರಿಸಿ ರೈತರನ್ನು ಕರೆದೊಯ್ಯಲಾಯಿತು.

ಸುಮಾರು ಎರಡು ಗಂಟೆಗಳ ಕಾಲ ಚನ್ನಮ್ಮ ವೃತ್ತದಲ್ಲಿ ಹೈಡ್ರಾಮಾ ನಡೆದಿದ್ದು, ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಕರಗುಪ್ಪಿ–ಪಾಶ್ಚಾಪುರ ರಸ್ತೆಯಲ್ಲಿ ಪೊಲೀಸರ ವಾಹನಕ್ಕೆ ಅಡ್ಡಿ

ಇನ್ನೊಂದೆಡೆ, ಕರಗುಪ್ಪಿ–ಪಾಶ್ಚಾಪುರ ರಸ್ತೆಯ ಮಧ್ಯೆ ರೈತರು ಪ್ರತಿಭಟನೆ ನಡೆಸಿ ಪೊಲೀಸರ ವಾಹನಕ್ಕೆ ಅಡ್ಡಲಾಗಿ ಬೇಲಿ ಹಾಕಿ ತಡೆದರು. ಪ್ರತಿಭಟನಾಕಾರರನ್ನು ಮೀಸಲು ಪೊಲೀಸ್ ಪಡೆ ವಾಹನದಲ್ಲಿ ಗೋಕಾಕ ಗುಡ್ಡದ ಕಡೆಗೆ ಕರೆದೊಯ್ಯುತ್ತಿದ್ದಾಗ ರೈತರು ವಾಹನವನ್ನು ತಡೆದರು.

ವಾಹನದಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ಕುಡಿಯಲು ನೀರು ನೀಡದೆ ಸತಾಯಿಸಲಾಗುತ್ತಿದೆ ಎಂದು ರೈತರು ಆರೋಪಿಸಿದರು. ಅಸ್ವಸ್ಥಗೊಂಡ ಪ್ರತಿಭಟನಾಕಾರರಿಗೆ ಬಸಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಮುನವಳ್ಳಿಯಲ್ಲಿ ಟೈರ್ ಸುಟ್ಟು ಹೆದ್ದಾರಿ ಬಂದ್

ಚೂನಪ್ಪ ಪೂಜಾರಿ ಬಂಧನ ಖಂಡಿಸಿ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಗೋಕಾಕ–ಸವದತ್ತಿ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಯರಗಟ್ಟಿಯಲ್ಲೂ ರಸ್ತೆ ತಡೆ

ಯರಗಟ್ಟಿ ಪಟ್ಟಣದಲ್ಲಿಯೂ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಬೆಳಗಾವಿ–ಬಾಗಲಕೋಟೆ ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ಬಂದ್ ಮಾಡಿ, ರಸ್ತೆಯ ಮಧ್ಯೆಯೇ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಬಂದ್‌ಗೆ ಕರೆ

ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಜೈಲ್ ಭರೋ ಚಳವಳಿಗೆ ಕರೆ ನೀಡಿದ್ದ ಚೂನಪ್ಪ ಪೂಜಾರಿ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ, ರಾಜ್ಯಾದ್ಯಂತ ಕರ್ನಾಟಕ ಬಂದ್ ನಡೆಸುವಂತೆ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಕರೆ ನೀಡಿದ್ದಾರೆ.

ಒಟ್ಟಾರೆ, ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಆರಂಭವಾದ ರೈತರ ಹೋರಾಟ ಇದೀಗ ಬಂಧನ, ರಸ್ತೆ ತಡೆ, ಟೈರ್ ದಹನ ಹಾಗೂ ಸಾಮೂಹಿಕ ಪ್ರತಿಭಟನೆಗಳ ಮೂಲಕ ಮತ್ತಷ್ಟು ತೀವ್ರಗೊಂಡಿದ್ದು, ಜಿಲ್ಲೆಯ ವಿವಿಧೆಡೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Related Articles

Back to top button