*ಹಾಸನಾಂಬ ದರ್ಶನಕ್ಕೆ ಭಕ್ತಸಾಗರ*: *ಪ್ರೋಟೋಕಾಲ್ ವಿಚಾರಕ್ಕೆ ಸಿಬ್ಬಂದಿ ಜೊತೆ ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ*

ಪ್ರಗತಿವಾಹಿನಿ ಸುದ್ದಿ: ಹಾಸನಾಂಬ ದೇವಿಯ ದರ್ಶನಕ್ಕೆ ಏಳನೇ ದಿನವೂ ಭಕ್ತರ ಮಹಾಪೂರವೇ ಹರಿದುಬರುತ್ತಿದೆ. ಇತ್ತ ದೇವಿಯ ದರ್ಶನಕ್ಕೆ ಬಂದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿ ನಡುವೆ ಪ್ರೋಟೋಕಾಲ್ ವಿಚಾರವಾಗಿ ವಾಗ್ವಾದ ನಡೆದಿದೆ. ಘಟನೆ ಬಳಿಕ ಜಿಲ್ಲಾಧಿಕಾರಿಯವರೂ ಮಧ್ಯಪ್ರವೇಶಿಸಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್, ಶಾಸಕಿ ಭಾಗೀರಥಿ ಹಾಗೂ ಎಂಎಲ್ಸಿ ಭೋಜೇಗೌಡ ಕುಟುಂಬ ಸಮೇತರಾಗಿ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ಇದೇ ವೇಳೆ ರಾಮನಗರ ಮತ್ತು ಕನಕಪುರದಿಂದ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಕುಟುಂಬದವರು ಶಿಷ್ಟಾಚಾರದ ವಾಹನದಲ್ಲಿ ಪ್ರವಾಸಿ ಮಂದಿರದಿಂದ ದೇವಾಲಯಕ್ಕೆ ಆಗಮಿಸಿದ್ದರು. ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ ಪ್ರಭಾವದಿಂದ ಐದಾರು ಮಂದಿ ಪ್ರೋಟೋಕಾಲ್ನಲ್ಲಿ ಬಂದಿದ್ದರು ಎನ್ನಲಾಗಿದೆ.
ದೇವಾಲಯದ ಮುಖ್ಯದ್ವಾರದ ಗೇಟ್ ಬಳಿ ಗ್ರಾಮ ಲೆಕ್ಕಾಧಿಕಾರಿ ಮನು ವಾಹನದಲ್ಲಿದ್ದವರನ್ನು ಇಳಿಸಿ, ಮತ್ತೊಬ್ಬ ಸಿಬ್ಬಂದಿಗೆ ಒಳಗೆ ಕರೆದುಕೊಂಡು ಹೋಗಿ ದರ್ಶನದ ಸಾಲಿಗೆ ಸೇರಿಸುವಂತೆ ಸೂಚಿಸಿದ್ದರು. ಆದರೆ, ಮನು ಕೂಡ ತಮ್ಮೊಂದಿಗೆ ಬರಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಗೇಟ್ವರೆಗೆ ಮಾತ್ರ ಸಿಬ್ಬಂದಿ ಬರಬೇಕೆಂದು ಎಡಿಸಿ ಸೂಚನೆ ನೀಡಿದ್ದಾರೆ ಎಂದು ಮನು ಸ್ಪಷ್ಟಪಡಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಮನು ವಿರುದ್ಧ ಕೂಗಾಡಿದ್ದಾರೆ. ದರ್ಶನ ಮುಗಿಸಿ ವಾಪಸ್ ಬಂದು ವಾಹನ ಹತ್ತುವ ಸಂದರ್ಭದಲ್ಲಿಯೂ ಸಿಬ್ಬಂದಿ ತಮ್ಮೊಂದಿಗೆ ಬರದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ಗ್ರಾಮ ಲೆಕ್ಕಾಧಿಕಾರಿ ಮತ್ತು ಸುಪ್ರೀತ್ ಎಂಬ ಅಧಿಕಾರಿಯ ವಿರುದ್ಧ ದೂರು ನೀಡಿದ್ದಾರೆ.
ದೂರು ಕೇಳಿದ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಗ್ರಾಮ ಲೆಕ್ಕಾಧಿಕಾರಿ ಮನು ಅವರನ್ನು ಕರೆಸುವಂತೆ ಸೂಚಿಸಿ, ಅಮಾನತು ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಕಾರ್ಯಕರ್ತರು ಅತಿಥಿಗಳು, ಸಮಾಧಾನದಿಂದ ವರ್ತಿಸಿ ಎಂದು ಸೂಚಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕಾರ್ಯಕರ್ತರಲ್ಲಿ ಕ್ಷಮೆ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಕರ್ತರು, “ಮೇಡಂ, ಹಾಸನಾಂಬ ದೇವಿಯನ್ನ ಇಲ್ಲೇ ನೋಡಿದಂತಾಯಿತು” ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ.
ಇನ್ನು, ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನಕ್ಕೆ ಏಳನೇ ದಿನವೂ ಭಕ್ತರ ದಂಡು ಹರಿದುಬಂದಿದೆ. ನಿನ್ನೆ ಮಧ್ಯರಾತ್ರಿ 12.30ರಿಂದ ಇಂದು ಬೆಳಿಗ್ಗೆ 5 ಗಂಟೆಯವರೆಗೆ ಅಲಂಕಾರ ಮತ್ತು ನೈವೇದ್ಯದ ಹಿನ್ನೆಲೆಯಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಲಾಗಿತ್ತು. ಹೀಗಾಗಿ, ರಾತ್ರಿಯಿಂದಲೇ ಭಕ್ತರು ದರ್ಶನಕ್ಕಾಗಿ ಕಾಯುತ್ತಿದ್ದರು. ಧರ್ಮದರ್ಶನದ ಸಾಲಿನ ಜೊತೆಗೆ 1,000 ಮತ್ತು 300 ರೂಪಾಯಿ ವಿಶೇಷ ದರ್ಶನದ ಸಾಲುಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.




